ಅರಮನೆ ಮೈದಾನದಲ್ಲಿ ಕಾನ್ಸ್‌ಸ್ಟೆಬಲ್ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31- ಸಮಯಪ್ರಜ್ಞೆಯಿಂದ ಮಗು ಸೇರಿದಂತೆ ನೂರಾರು ಮಂದಿ ಕಾರ್ಮಿಕರ ಪ್ರಾಣ ರಕ್ಷಣೆ ಮಾಡಿದ ಶಿವಾಜಿನಗರ ಠಾಣೆಯ ಕಾನ್ಸ್‌ಸ್ಟೆಬಲ್ ರವಿಕುಮಾರ್ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ಸನ್ಮಾನಿಸಿ ನಗದು, ಬಹುಮಾನ ನೀಡಿದ್ದಾರೆ.

ಕಾನ್ಸ್‍ಟೇಬಲ್ ರವಿಕುಮಾರ್ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿ ಒಳ್ಳೆ ಕೆಲಸವನ್ನು ಅವರು ಮಾಡಿದ್ದಾರೆ, ಇಲಾಖೆಗೆ ಕೀರ್ತಿ ತಂದಿದ್ದಾರೆ, ಕೆಲವರಿಗೆ ಅವಕಾಶ ಸಿಗುತ್ತದೆ. ಮತ್ತೆ ಕೆಲವರಿಗೆ ಸಿಗುವುದಿಲ್ಲ , ಸಮಯ ಪ್ರಜ್ಞೆಯಿಂದ ರವಿಕುಮಾರ್ ಕಾರ್ಮಿಕರ ಪ್ರಾಣರಕ್ಷಣೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ರಾಮಮಂದಿರಕ್ಕೆ ಸಂಬಂಸಿದಂತೆ ಸುಪ್ರೀಂಕೋರ್ಟ್ ತೀರ್ಪು ಬಂದ ಸಂದರ್ಭ, ಕೊರೊನಾ ಸಂದರ್ಭ ಸೇರಿದಂತೆ ಹಲವು ಸಂದರ್ಭಗಳು ಪೊಲೀಸರಿಗೆ ಸವಾಲಾಗಿದ್ದವು. ಇಂತಹ ಸಂದರ್ಭದಲ್ಲಿ ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದರು.

# ಏನಿದು ಘಟನೆ..?
ಕಳೆದ ಶುಕ್ರವಾರ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ಕೆಲಸ ನಡೆಯುತ್ತಿತ್ತು, ಅರಮನೆ ಮೈದಾನದ ಟೆನ್ನಿಸ್ ಪೆವಿಲಿಯನ್‍ನಲ್ಲಿ ಕಾರ್ಮಿಕರಿಗೆ ಶೆಲ್ಟರ್ ನಿರ್ಮಾಣ ಮಾಡಲಾಗಿತ್ತು. ಈ ವೇಳೆ ಬಿರುಗಾಳಿ ಸಹಿತ ಭಾರೀ ಮಳೆಗೆ ಮರ ಧರೆಗುರುಳಿದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಿರ್ಮಿಸಿದ್ದ ಶೆಲ್ಟರ್ ಕುಸಿದು ಬಿತ್ತು.

ಈ ವೇಳೆ ಅಲ್ಲಿ ಕರ್ತವ್ಯದಲ್ಲಿ ಹಾಜರಿದ್ದ ಶಿವಾಜಿನಗರದ ಕಾನ್ಸ್‍ಟೇಬಲ್ ದಾವಣಗೆರೆ ಮೂಲದ ಎಂಬಿಎ ಗೋಲ್ಡ್ ಮೆಡಲಿಸ್ಟ್ ರವಿಕುಮಾರ್ ಸಮಯಪ್ರಜ್ಞೆ ಮೆರೆದು ಶೆಲ್ಟರ್ ಅವಶೇಷಗಳಡಿ ಸಿಲುಕಿದ್ದ ಮಗು ಸೇರಿ ನೂರಾರು ಜನರನ್ನು ಒಬ್ಬರೇ ರಕ್ಷಿಸಿದ್ದಾರೆ.

ಈ ಶೆಲ್ಟರ್ ಅಡಿ ಸುಮಾರು 400ಕ್ಕೂ ಹೆಚ್ಚು ಜನ ವಿವಿಧ ರಾಜ್ಯಗಳ ಕಾರ್ಮಿಕರು ಆಸರೆ ಪಡೆದಿದ್ದರು. ಅಂದು ಏನಾದರೂ ಇವರು ಸಮಯಪ್ರಜ್ಞೆ ಮೆರೆಯದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು.
ಇವರ ಈ ಸಮಯಪ್ರಜ್ಞೆ ಮತ್ತು ಕುಸಿದು ಬಿದ್ದ ಶೆಲ್ಟರ್ ಅಡಿಯಿಂದ ಕಾರ್ಮಿಕರನ್ನು ರಕ್ಷಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಆಯುಕ್ತರಾದ ಭಾಸ್ಕರ್‍ರಾವ್ ಅವರು ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.

ರವಿಕುಮಾರ್ ಅವರ ಈ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಸಂದರ್ಭದಲ್ಲಿ ಪೂರ್ವವಲಯದ ಹೆಚ್ಚುವರಿ ಪೊಲೀಸ್ ಕಮೀಷನರ್ ಮುರುಗನ್, ಡಿಸಿಪಿ ಡಾ.ಶರಣಪ್ಪ ಮುಂತಾದವರು ಇದ್ದರು.

Facebook Comments

Sri Raghav

Admin