ಉಗ್ರರ ಸಖ್ಯ ಹೊಂದಿದ್ದ ದೇವೀಂದರ್ ಸಿಂಗ್ ಶೌರ್ಯ ಪದಕ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜ.16- ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಭಯೋತ್ಪಾದಕರನ್ನು ಸಾಗಿಸಲು ನೆರವಾದ ಕಾರಣಕ್ಕೆ ಬಂಧಿತರಾಗಿರುವ ಡಿವೈಎಎಸ್ಪಿ ದೇವೀಂದರ್ ಸಿಂಗ್ ಅವರಿಗೆ ನೀಡಲಾದ ಶೇರ್-ಎ-ಕಾಶ್ಮೀರ್ ಪೊಲೀಸ್ ಶೌರ್ಯ ಪದಕವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಾಪಸ್ ಪಡೆದಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹುದ್ದೆ ಬಡ್ತಿಯಿಂದ ಮೊನ್ನೆಯಷ್ಟೇ ತಡೆ ಹಿಡಿಯಲ್ಪಟ್ಟ ಸಿಂಗ್‍ಗೆ ಇದು ಎರಡನೆ ಆಘಾತವಾಗಿದೆ.

ಉಗ್ರರ ಜೊತೆ ಗುರುತಿಸಿಕೊಂಡ ಕಾರಣಕ್ಕೆ ಅಮಾನತು ಶಿಕ್ಷೆಗೆ ಗುರಿಯಾಗಿರುವ ದೇವೀಂದರ್ ಸಿಂಗ್ ನಂಬಿಕೆ ದ್ರೋಹ ಮತ್ತು ಪೊಲೀಸ್ ಪಡೆಗೆ ಅಪಖ್ಯಾತಿ ತಂದಿದ್ದಾರೆ. ಈ ಕಾರಣಕ್ಕಾಗಿ ಅವರ ಶೌರ್ಯ ಪದಕವನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇವಿಂದರ್ ಸಿಂಗ್ ಅವರಿಗೆ 2018ರಲ್ಲಿ ಪೊಲೀಸ್ ಶೌರ್ಯ ಪದಕವನ್ನು ನೀಡಿ ಗೌರವಿಸಲಾಗಿತ್ತು.

ನವೀದ್ ಅಹಮದ್ ಶಾ ಅಲಿಯಾಸ್ ನವೀದಿ ಬಾಬು ಎಂಬಾತ ಪೊಲೀಸ್ ಪೇದೆಯಾಗಿದ್ದ. 2017ರಲ್ಲಿ ಕರ್ತವ್ಯ ತ್ಯಜಿಸಿದ್ದ ಈತ 4 ಬಂದೂಕುಗಳನ್ನು ಕದ್ದು ಹಿಜ್ಬುಲ್ ಮುಜಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ. ಪೊಲೀಸ್ ಸಿಬ್ಬಂದಿ, ನಾಗರೀಕರ ಹತ್ಯೆ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ. ಹೀಗಾಗಿ ನವೀದ್ ಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದರು.

ನವೀದ್ ಹಾಗೂ ಮತ್ತೊಬ್ಬ ಉಗ್ರ ಜಮ್ಮುವಿನತ್ತ ಕಾರಿನಲ್ಲಿ ತೆರಳುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರೊಂದನ್ನು ತಪಾಸಣೆ ನಡೆಸಿದ್ದರು. ಈ ವೇಳೆ ಪೊಲೀಸರಿಗೆ ಅಚ್ಛರಿಯಾಗಿದೆ. ಕಾರಿನಲ್ಲಿ ಉಗ್ರರೊಂದಿಗೆ ಹಾಲಿ ಡಿವೈಎಸ್ಪಿ ದೇವೀಂದರ್ ಸಿಂಗ್ ಕೂಡ ಇರುವುದು ಕಂಡು ಬಂದಿತ್ತು. ಈ ವೇಳೆ ಮೂವರನ್ನೂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಇದೇ ಕಾರಿನಲ್ಲಿ ಉಗ್ರರ ಪರ ಕಾರ್ಯ ನಿರ್ವಹಿಸುತ್ತಿದ್ದ ವಕೀಲರೊಬ್ಬರೂ ಕೂಡ ಸಿಕ್ಕಿಬಿದ್ದಿದ್ದಾರೆಂದು ವರದಿಗಳು ತಿಲಿಸಿವೆ. ಪ್ರಸ್ತುತ ಬಂಧನಕ್ಕೊಳಗಾಗಿರುವ ಡಿವೈಎಸ್ಪಿ ಸಿಂಗ್ 1990ರಿಂದಲೂ ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇದೀಗ ಉಗ್ರರ ಜೊತೆಗೆ ಸಿಕ್ಕಿಬಿದ್ದಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.

Facebook Comments