ಬ್ರಿಟನ್‍ನಿಂದ ಶಿವಮೊಗ್ಗಕ್ಕೆ ಆಗಮಿಸಿದ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.24- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ, ಒಂದೇ ಕುಟುಂಬದ ನಾಲ್ವರಿಗೆ (ಬ್ರಿಟನ್‍ನಿಂದ ಆಗಮಿಸಿದ) ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.  ಕಳೆದ ಸೋಮವಾರ ಬ್ರಿಟನ್‍ನಿಂದ ಆಗಮಿಸಿದ ಈ ನಾಲ್ವರನ್ನು ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದೀಗ ನಾಲ್ವರಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದು ಬ್ರಿಟನ್‍ನಲ್ಲಿ ಹಬ್ಬಿರುವ ಸೋಂಕು ಇರುಬಹುದೆಂಬ ಆತಂಕ ಜಿಲ್ಲೆಯಲ್ಲಿ ಮನೆ ಮಾಡಿದೆ. ನಾಲ್ವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಇದು ರೂಪಾಂತರಗೊಂಡ ಕೊರೊನಾ ಸೋಂಕೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇಂದು ಸಂಜೆಯೊಳಗೆ ವರದಿ ಬರುವ ನಿರೀಕ್ಷೆಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜನತೆ ಅನಗತ್ಯವಾಗಿ ಗೊಂದಲಕ್ಕೀಡಾಗಬಾರದೆಂದು ಜಿಲ್ಲಾಡಳಿತ ಮನವಿ ಮಾಡಿದೆ. ನಾವು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Facebook Comments