ಶಿವಮೊಗ್ಗ-ಚೆನ್ನೈ ರೈಲಿಗೆ ಸಿಎಂ ಯಡಿಯೂರಪ್ಪ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.27- ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಭೂಮಿ ಹಾಗೂ ಅನುದಾನ ನೀಡಲು ಸಿದ್ದವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಹೇಳಿದರು.  ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ-ಚೆನ್ನೈ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ರೀತಿಯ ನೆರವು ನೀಡಲಿದೆ. ಕೇಂದ್ರವು ನಮ್ಮ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಈ ಹಿಂದೆಯೇ ನಾವು ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದೆವು. ಮುಂಬರುವ ಬಜೆಟ್‍ನಲ್ಲೂ ಕೂಡ ಯೋಜನೆಗಳ ಅನುದಾನವನ್ನು ಮೀಸಲಿಡಲಾಗುವುದು. ನಮ್ಮಿಂದ ಎಲ್ಲ ರೀತಿಯ ಸಹಕಾರ ಕೊಡಲಾಗುವುದು ಎಂದು ಭರವಸೆ ನೀಡಿದರು.  ಕೇಂದ್ರದಿಂದಲೂ ನಮಗೆ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಕಾರಾತ್ಮಕ ಸ್ಪಂದನೆ ಸಿಗುತ್ತದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಘೋಷಣೆಗಳನ್ನು ಮಾಡದೇ ಈಗಾಗಲೇ ಘೋಷಣೆ ಮಾಡಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ವಿಶೇಷವಾಗಿ ರೈಲ್ವೆ ಇಲಾಖೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿರುವುದು ಹಾಗೂ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈಲ್ವೆ ಇಲಾಖೆಯಲ್ಲಿ ಹೊಸದೊಂದು ಕ್ರಾಂತಿಯಾಗಿದೆ ಎಂದುಬ ಬಣ್ಣಿಸಿದರು.

ನಾವು ಕೇವಲ ಬಜೆಟ್‍ನಲ್ಲಿ ಯೋಜನೆಗಳನ್ನು ಘೋಷಣೆ ಮಾಡುತ್ತಿಲ್ಲ. ಇದರಿಂದ ಜನರಿಗೂ ಯಾವುದೆ ಪ್ರಯೋಜನವೂ ಇಲ್ಲ. ಹೊಸ ಯೋಜನೆಗಳನ್ನು ಘೋಷಣೆ ಮಾಡದೆ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಕಾರ್ಯರೂಪಗೊಳಿಸುತ್ತಿದ್ದೇವೆ ಎಂದು ಹೇಳಿದರು.  ರೈಲ್ವೆ ಇಲಾಖೆಯು ಜನಸಾಮಾನ್ಯರ ಇಲಾಖೆಯಾಗಿರುವುದರಿಂದ ನಾವು ಮೂಲಭೂತ ಸೌಕರ್ಯಗಳು ಹಾಗೂ ಆಧುನೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಪರಿಣಾಮ ಇಂದು ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದರು.

ಕರ್ನಾಟಕದಲ್ಲಿ ಬಾಕಿ ಇರುವ ಯೋಜನೆಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಮಗೆ ಮುಖ್ಯಮಂತ್ರಿಯವರಿಂದ ಎಲ್ಲ ರೀತಿಯ ನೆರವು ಸಿಗುತ್ತಿದೆ. ರಾಜ್ಯ ಸರ್ಕಾರ ಅನುದಾನ ಮತ್ತು ಭೂಮಿ ನೀಡಲು ಮುಂದೆ ಬಂದಿದೆ. ಹಂತ ಹಂತವಾಗಿ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣ ಮಾಡಲಾಗುವುದು ಎಂದು ಹೇಳಿದರು. ಚೆನ್ನೈ ಮತ್ತು ಶಿವಮೊಗ್ಗ ನಡುವೆ ಸಂಚರಿಸುವ ರೈಲ್ವೆನಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಫ್ಯಾಕ್ಟರಿಯನ್ನು ನೀಡಿದ್ದೇವೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ನೆರವು ಸಿಕ್ಕಿದೆ ಎಂದು ಹೇಳಿದರು.

Facebook Comments