ಶಿರಡಿ ಸಾಯಿಬಾಬಾಗೆ ‘ಚಿಲ್ಲರೆ’ ತಲೆನೋವು..!

ಈ ಸುದ್ದಿಯನ್ನು ಶೇರ್ ಮಾಡಿ

ನಾಸಿಕ್, ಜೂ. 18- ವಿಶ್ವ ವಿಖ್ಯಾತ ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ನೀಡಿರುವ ಲಕ್ಷಾಂತರ ರೂ.ಗಳ ನಾಣ್ಯಗಳು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ನಾಸಿಕ್ ಜಿಲ್ಲೆಯ ಶಿರಡಿಯಲ್ಲಿರುವ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಪ್ರತಿವಾರ ಸರಾಸರಿ 14ಲಕ್ಷ ರೂ.ಗಳಷ್ಟು ಮೌಲ್ಯದ ನಾಣ್ಯಗಳು ಸಂಗ್ರಹವಾಗುತ್ತಿದೆ. ಪ್ರತಿವಾರ ಶೇಖರವಾಗುತ್ತಿರುವ ಲಕ್ಷಾಂತರ ರೂ.ಗಳ ನಾಣ್ಯಗಳ ರಾಶಿ ಬೆಳೆಯುತ್ತಲೇ ಇದೆ. ಆದರೆ ಈ ನಾಣ್ಯಗಳನ್ನು ತನ್ನ ಬಳಿ ಇಟ್ಟುಕೊಳ್ಳಲು ಬ್ಯಾಂಕುಗಳು ನಿರಾಕರಿಸಿವೆ.

ಬ್ಯಾಂಕ್ ಲಾಕರ್‍ಗಳಲ್ಲಿ ಇಷ್ಟೊಂದು ನ್ಯಾಣಗಳನ್ನು ಇಟ್ಟುಕೊಳ್ಳಲು ಸ್ಥಳಾವಕಾಶದ ಕೊರತೆಯಿದೆ ಎಂದು ಕಾರಣ ನೀಡಿವೆ. ದೇಶ-ವಿದೇಶಗಳ ಭಕ್ತರು ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡ ಕಾಣಿಕೆ ಹುಂಡಿಗಳಲ್ಲಿ ಉದಾರ ಕಾಣಿಕೆಗಳನ್ನು ನೀಡುತ್ತಾರೆ. ಪ್ರತಿವಾರ ಸುಮಾರು 2ಕೋಟಿ ರೂ.ಗಳಷ್ಟು ಕಾಣಿಕೆ ಹಣದ ರೂಪದಲ್ಲಿ ಸಂಗ್ರಹವಾಗುತ್ತಿದೆ.

ಇವುಗಳಲ್ಲಿ ಸುಮಾರು 14ಲಕ್ಷ ರೂ.ಗಳಷ್ಟು ನಾಣ್ಯಗಳೇ ಇರುತ್ತವೇ ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನಂ ಟ್ರಸ್ಟ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ದೀಪಕ್ ಮುಗಳೀಕರ್ ಹೇಳಿದ್ದಾರೆ.

ದೇವಸ್ಥಾನಕ್ಕೆ ಭಕ್ತರು ನೀಡುವ ಕಾಣಿಕೆ ಹಣವನ್ನು ವಾರಕ್ಕೆ ಎರಡು ಬಾರಿ ಎಣಿಕೆ ಮಾಡಲಾಗುತ್ತದೆ. ನಾಣ್ಯಗಳನ್ನು ಪ್ರತ್ಯೇಕಿಸಿ ರಾಶಿ ಮಾಡಲಾಗುತ್ತದೆ. ದೇವಸ್ಥಾನವು ಒಟ್ಟು 12 ಬ್ಯಾಂಕುಗಳಲ್ಲಿ ತನ್ನ ಖಾತೆಗಳನ್ನು ಹೊಂದಿದೆ. ಆದರೆ ಸ್ಥಳಾವಕಾಶದ ಕಾರಣಗಳನ್ನು ನೀಡಿ ಯಾವುದೇ ಬ್ಯಾಂಕುಗಳು ನಾಣ್ಯಗಳನ್ನು ಸ್ವೀಕರಿಸಲು ಮುಂದಾಗುತ್ತಿಲ್ಲ.

ನಾವೇ ಪ್ರತ್ಯೇಕ ಸ್ಥಳ ಒದಗಿಸುತ್ತೇವೆ ಎಂದು ಬ್ಯಾಂಕಿಗಳಿಗೆ ಮನವಿ ಮಾಡಿದ್ದರೂ ಏನು ಪ್ರಯೋಜವಾಗಿಲ್ಲ. ಹೀಗಾಗಿ ನಾಣ್ಯಗಳನ್ನು ಎಲ್ಲಿ ಸಂಗ್ರಹಿಸಿಡುವುದು ಮತ್ತು ಏನು ಮಾಡುವುದು ಎಂದು ನಮಗೆ ತೋಚುತ್ತಿಲ್ಲ ಎಂದು ಸಿಇಒ ದೀಪಕ್ ಮುಗಳೀಕರ್ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

 

Facebook Comments