ಶಿವ ಭೋಜನ್‍ನಲ್ಲಿ 10 ರೂ.ಗೆ ಸಿಗುತ್ತೆ ಫುಲ್‍ ಮೀಲ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಫೆ.14- ಹೊಟೇಲ್‍ಗಳಲ್ಲಿ ತಿಂಡಿ ಹಾಗೂ ಊಟದ ದರ ಗಗನಕ್ಕೇರಿದ್ದರೆ ಶಿವ ಭೋಜನ್‍ನಲ್ಲಿ 10 ರೂ.ಗೆ ಫುಲ್‍ಮೀಲ್ಸ್ ಸಿಗುವ ಮೂಲಕ ಜನರ ಗಮನ ಸೆಳೆದಿದೆ. ಶಿವ ಭೋಜನ್‍ನಲ್ಲಿ 10 ರೂ.ಗೆ ಎರಡು ಚಪಾತಿ, ಅನ್ನ ಸಂಬಾರ್, ಪಲ್ಯ ಹಾಗೂ ಒಂದು ರೀತಿಯ ಸ್ವೀಟ್ ಸಿಗುವುದರಿಂದ ಜನರು ಮುಗಿಬಿದ್ದು ತಿನ್ನುವುದರಿಂದ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಹೋಗುತ್ತಿದ್ದು ಇದುವರೆಗೂ 2 ಲಕ್ಷಕ್ಕೂ ಹೆಚ್ಚು ಮಂದಿ ಶಿವ ಭೋಜನದ ಸವಿಯನ್ನು ಸವಿದಿದ್ದಾರೆ.

ಅಂದ ಹಾಗೆ ಶಿವ ಭೋಜನವು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಸ್ಥಾಪಿಸಿದ ಇಂದಿರಾ ಕ್ಯಾಂಟೀನ್ ಮಾದರಿಯಾಗಿದ್ದು ಮಹಾರಾಷ್ಟ್ರದಲ್ಲಿ ಠಾಕ್ರೆ ಸರ್ಕಾರ ಅಧಿಕಾರಕ್ಕೆ ಬಂದ ಸವಿನೆನಪಿಗಾಗಿ ಜನವರಿ 26ರ ಗಣರಾಜ್ಯೋತ್ಸವದಂದು ಈ ಯೋಜನೆಗೆ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಚಾಲನೆ ನೀಡಿದ್ದರು.

ಬಡವರು, ಕಾರ್ಮಿಕರು ಹೊಟ್ಟೆ ತುಂಬಿಸಲು ಈ ಯೋಜನೆಯನ್ನು ಜಾರಿಗೆ ತಂದಿದ್ದು ಸ್ವತಃ ಸಿಎಂ ಉದ್ಭವ್ ಠಾಕ್ರೆಯವರೇ ಈ ಶಿವ ಭೋಜನದ ಉಸ್ತುವಾರಿಯನ್ನು ಹೊತ್ತುಕೊಂಡಿರುವುದರಿಂದ ದಿನ ನಿತ್ಯ ಶುಚಿ ಹಾಗೂ ರುಚಿ ಆಹಾರ ದೊರಕುತ್ತಿದೆ.

ಮಹಾರಾಷ್ಟ್ರದ ವಿವಿಧ ಕಡೆ ಶಿವ ಭೋಜನ್ ಅನ್ನು ಆರಂಭಿಸಿದ್ದು ಬೆಳಗಿನ ತಿಂಡಿಗೆ 5 ರೂ. ದರ ನಿಗದಿಪಡಿಸಿದ್ದು ಇಂದಿರಾ ಕ್ಯಾಂಟೀನ್‍ನಲ್ಲಿ ಇರುವಂತೆಯೇ ಪ್ರತಿದಿನವೂ ಒಂದೊಂದು ರೀತಿಯ ಭಕ್ಷ್ಯವನ್ನು ನೀಡಲಾಗುತ್ತದೆ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ 10 ರೂ. ನಿಗದಿ ಪಡಿಸಿದ್ದು ಇದರಲ್ಲಿ ಒಂದು ಬೌಲ್ ಅನ್ನ, ದಾಲ್, ತರಕಾರಿ, 2 ಚಪಾತಿ, ಒಂದು ಸ್ವೀಟ್ ಸಿಗುತ್ತದೆ. ಪ್ರತಿನಿತ್ಯ ಶಿವಭೋಜನ್‍ನಲ್ಲಿ 13,750ಕ್ಕೂ ಹೆಚ್ಚು ಜನ ಭೋಜನ ಮಾಡುತ್ತಿದ್ದು ಕೇವಲ 17 ದಿನಗಳಲ್ಲಿ ಒಟ್ಟು 2.33 ಲಕ್ಷ ಜನರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ.

Facebook Comments