ಮಹಾರಾಷ್ಟ್ರದಲ್ಲಿ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ : ಶಿವಸೇನೆ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.16-ಮೂರು ಪಕ್ಷಗಳು ಹೊಸ ಮೈತ್ರಿಗೆ ವೇದಿಕೆ ಸಿದ್ಧವಾಗುತ್ತಿರುವಾಗಲೇ ತಾನು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದಾಗಿ ಬಿಜೆಪಿ ನೀಡಿರುವ ಹೇಳಿಕೆ ಆ ಪಕ್ಷವು ಕುದುರೆ ವ್ಯಾಪಾರದಲ್ಲಿ ತೊಡಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಶಿವಸೇನೆ ಆರೋಪಿಸಿದೆ. ಶಿವಸೇನೆಯ ಮುಖವಾಣಿ ಸಾಮ್ನಾ (ಮರಾಠಿ ದಿನಪತ್ರಿಕೆ)ದ ಸಂಪಾದಕೀಯದಲ್ಲಿ ಎಂದಿನಂತೆ ಬಿಜೆಪಿ ವಿರುದ್ಧ ದಾಳಿ ನಡೆಸಲಾಗಿದ್ದು, ಕುದುರೆ ವ್ಯಾಪಾರ ಸಾಧ್ಯತೆ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ತಮ್ಮ ಪಕ್ಷದ ಪರವಾಗಿ ಈಗಲೂ 11 ಶಾಸಕರು ಬೆಂಬಲ ನೀಡುತ್ತಿದ್ದಾರೆ. (ಶಿವಸೇನೆ 105+11= 116) ಎಂದು ಹೇಳಿದ್ದಾರೆ. ಇದನ್ನು ಗಮನಿಸಿದರೆ ರಾಷ್ಟ್ರಪತಿ ಆಡಳಿತದ ನಡುವೆಯೂ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿರುವ ಶಂಕೆ ಪುಷ್ಟಿ ನೀಡುತ್ತಿದೆ ಎಂದು ಅಗ್ರಲೇಖನದಲ್ಲಿ ಆರೋಪಿಸಲಾಗಿದೆ.

ಶಿವಸೇನೆ -ಎನ್‍ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಆಯುಸ್ಸು ಕೇವಲ ಆರು ತಿಂಗಳು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿರುವ ಹೇಳಿಕೆಗೆ ಸಾಮ್ನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹೊಸ ಮೈತ್ರಿಯು ಕೆಲವರ ಹೊಟ್ಟೆ ಉರಿಗೆ ಕಾರಣವಾಗಿದೆ ಎಂದು ಕಟುವಾಗಿ ಟೀಕಿಸಿದೆ.

ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿರುವ ಬಗ್ಗೆ ಎನ್‍ಸಿಪಿ ಮುಖ್ಯ ವಕ್ತಾರ ನವಾಬ್ ಮಲ್ಲಿಕ್ ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೂರು ಪಕ್ಷದ ಶಾಸಕರಲ್ಲಿ ಕೆಲವರನ್ನು ಮನವೊಲಿಸಿ ತನ್ನತ್ತ ಸೆಳೆಯುವ ಕುತಂತ್ರ ರೂಪಿಸುವ ಸಾಧ್ಯತೆಯು ಇದೆ ಎಂದು ಅವರು ಆರೋಪಿಸಿದರು.

Facebook Comments