ಪಟ್ಟು ಬಿಡದ ಶಿವಸೇನೆ, ಕುರ್ಚಿ ಬಿಡದ ಬಿಜೆಪಿ : ರಾಷ್ಟ್ರಪತಿ ಆಳ್ವಿಕೆಯತ್ತ ಮಹಾರಾಷ್ಟ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ನ.8- ಮಹಾರಾಷ್ಟ್ರ ವಿಧಾನಸಭೆ ಅವಧಿ ನಾಳೆ ಮುಕ್ತಾಯಗೊಳ್ಳಲಿದ್ದರೂ ಬಿಜೆಪಿ ಮತ್ತು ಶಿವಸೇನೆ ಮಿತ್ರ ಪಕ್ಷಗಳ ನಡುವೆ ಸರ್ಕಾರ ರಚನೆಗಾಗಿ ಅಧಿಕಾರ ಹಂಚಿಕೆಯ ಹಗ್ಗಜಗ್ಗಾಟ ಯಥಾಸ್ಥಿತಿಯಲ್ಲೇ ಮುಂದುವರೆದಿದ್ದು, ಎಲ್ಲವೂ ಅಯೋಮಯವಾಗಿದೆ. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯುವ ಸಾಧ್ಯತೆ ನಡುವೆಯೇ ಇಂದಿನ ವಿದ್ಯಮಾನಗಳು ಮುಂದಿನ ಬೆಳವಣಿಗೆಗಳ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.

ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ನೀಡುವ ವಿಷಯದ ಬಗ್ಗೆ ಚರ್ಚಿಸಲು ಮಾತ್ರ ತಮ್ಮ ಪಕ್ಷವನ್ನು ಬಿಜೆಪಿ ನಾಯಕರು ಭೇಟಿ ಮಾಡಬೇಕು. ಅದರ ಹೊರತು ಕೇಸರಿ ಪಕ್ಷದೊಂದಿಗೆ ಬೇರೆ ಯಾವ ವಿಷಯ ಮಾತನಾಡಲು ಸಾಧ್ಯವೇ ಇಲ್ಲ ಎಂದು ವ್ಯಾಘ್ರ ಲಾಂಛನದ ಪಕ್ಷ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಶಿವಸೇನೆಗೆ ಸಿಎಂ ಹುದ್ದೆ ನೀಡಬೇಕು, ಶೇ. 50-50 ಅನುಪಾತದಲ್ಲಿ ಅಧಿಕಾರ ನೀಡಬೇಕೆಂಬ ತನ್ನ ಬಿಗಿಪಟ್ಟನ್ನು ಉದ್ದವ್ ಠಾಕ್ರೆ ನೇತೃತ್ವದ ಪಕ್ಷವು ಕೊಂಚವೂ ಸಡಿಲಿಸದ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಬಗ್ಗೆ ಚುನಾವಣೆ ಫಲಿತಾಂಶದ 14 ದಿನಗಳ ನಂತರವೂ ಯಾವುದೇ ಸ್ಪಷ್ಟ ನಿರ್ಧಾರ ಹೊರಹೊಮ್ಮಿಲ್ಲ.

ಮುಂಬೈನಲ್ಲಿ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ಪ್ರಭಾವಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಸಿಎಂ ಹುದ್ದೆ ನೀಡುವ ತಮ್ಮ ಬೇಡಿಕೆ ಕುರಿತು ಚರ್ಚಿಸಲಷ್ಟೇ ಬಿಜೆಪಿ ತಮ್ಮ ಪಕ್ಷದ ಬಳಿ ಬರಬೇಕು. ಇಲ್ಲದಿದ್ದರೆ ಅವರು ತಮ್ಮ ಬಳಿ ಬರುವ ಅಗತ್ಯವೇ ಇಲ್ಲ ಎಂದು ಖಡಾಕಂಡಿತವಾಗಿ ಹೇಳಿದ್ದಾರೆ. ಇದರಿಂದ ಸರ್ಕಾರ ರಚನೆಯ ಕ್ಲೈಮಾಕ್ಸ್ ಹಂತದಲ್ಲಿ ಬಿಜೆಪಿಗೆ ಭಾರೀ ನಿರಾಶೆಯಾಗಿದೆ.

ನಾಳೆ ಮಹಾರಾಷ್ಟ್ರ ವಿಧಾನಸಭೆ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಸ್ಥಾನಕ್ಕೆ ಇಂದೇ ರಾಜೀನಾಮೆ ನೀಡಬೇಕು ಎಂದು ಶಿವಸೇನೆ ವಕ್ತಾರ ರಾವತ್ ಆಗ್ರಹಿಸಿದರು.  ಉಸ್ತುವಾರಿ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದೀರ್ಘಕಾಲ ಮುಂದುವರೆದಿದೆ. ತನ್ನ ಕೇರ್‍ಟೇಕರ್ ಪವರ್‍ನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರದಲ್ಲಿ ತಲೆದೋರಿರುವ ಪರಿಸ್ಥಿತಿಗೆ ಬಿಜೆಪಿಯೇ ಕಾರಣ. ಚುನಾವಣೆಗೆ ಮುನ್ನ ಅಧಿಕಾರ ಹಂಚಿಕೆ ಕುರಿತು ಉಭಯ ಪಕ್ಷಗಳ ನಡುವೆ ಆಗಿದ್ದ ಒಪ್ಪಂದವನ್ನುಬಿಜೆಪಿ ನಾಯಕರು ಉಲ್ಲಂಘಿಸಿದ್ದಾರೆ ಎಂದು ರಾವತ್ ಆರೋಪಿಸಿದರು.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್:
ಈ ನಡುವೆ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ನಿರ್ಗಮಿತ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಧುರೀಣ ವಿಜಯ್ ವೆಡೆಟ್ಟಿವಾರ್ ಶಿವಸೇನೆ ತಮ್ಮ ಪಕ್ಷದ ಶಾಸಕರನ್ನು 25ರಿಂದ 50 ಕೋಟಿ ರೂ.ಗಳ ಆಫರ್ ನೀಡುತ್ತಿದೆ ಎಂದು ಆರೋಪಿಸಿದರು. ಕೆಲವು ಶಾಸಕರಿಗೆ ಶಿವಸೇನೆ ಮುಖಂಡರು ದೂರವಾಣಿ ಕರೆ ಮಾಡಿ ತಮ್ಮ ಪಕ್ಷದತ್ತ ಸೆಳೆಯಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಭಾರೀ ಹಣದ ಆಮಿಷ ಒಡ್ಡಲಾಗಿದೆ. ಇನ್ನು ಕೆಲವು ಶಾಸಕರ ಬೆಂಬಲ ಪಡೆಯಲು ಬಿಜೆಪಿ ಸಹ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಈ ಮಧ್ಯೆ ಮುಂಬೈನಲ್ಲಿ ಕಾಂಗ್ರೆಸ್ ನೂತನ ಶಾಸಕರ ಸಭೆ ನಡೆದು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳ ಸಾಹೇಬ್ ಸೇರಿದಂತೆ 46 ಕಾಂಗ್ರೆಸ್ ಎಂಎಲ್‍ಎಗಳು ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಮತ್ತು ಶಿವಸೇನೆಯಿಂದ ಶಾಸಕರ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಂಎಲ್‍ಎಗಳನ್ನು ರೆಸಾರ್ಟ್‍ನಲ್ಲಿ ಯಾವುದೇ ಸಂಪರ್ಕವಿಲ್ಲದೆ ಇರಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಇದೇ ಕಾರಣಕ್ಕಾಗಿ ಬಿಜೆಪಿಯಿಂದ ತಮ್ಮ ಶಾಸಕರನ್ನು ಸೆಳೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಶಿವಸೇನೆ ಕೂಡ ತನ್ನ 56 ಎಂಎಲ್‍ಎಗಳನ್ನು ರೆಸಾರ್ಟ್‍ನಲ್ಲಿ ಇರಿಸಿ ಬಾಹ್ಯ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಿದೆ. ಮಹಾರಾಷ್ಟ್ರ ವಿದ್ಯಮಾನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಎನ್‍ಸಿಪಿ ನಾಯಕ ಶರದ್ ಪವಾರ್ ಮಹಾರಾಷ್ಟ್ರ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯತ್ತ ಸರಿಯುವ ಆತಂಕ ಸೃಷ್ಟಿಯಾಗಿದೆ. ಇದಕ್ಕೆ ಬಿಜೆಪಿಯೇ ಹೊಣೆ ಎಂದು ಆರೋಪಿಸಿದರು.

Facebook Comments