ಶಿವಸೇನೆ ಮುಖಂಡ ಆನಂದ್ ರಾವ್‌ಗೆ ಇಡಿ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.27- ಜಾರಿ ನಿರ್ದೇಶನಾಲಯ ಇಂದು ಎರಡು ಕಡೆಗಳಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಗಳ ವಿಚಾರಣೆ ನಡೆಸಿದೆ. ಮುಂಬೈನ ಸಿಟಿ ಕೋಆಪರೆಟಿವ್ ಬ್ಯಾಂಕ್‍ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಶಿವಸೇನೆಯ ಮುಖಂಡ ಆನಂದ್ ರಾವ್ ಅಡ್ಸುಲ್ ಅವರಿಗೆ ನೋಟಿಸ್ ನೀಡಲಾಗಿತ್ತು. ಅಧಿಕಾರಿಗಳ ತಂಡ ಆನಂದರಾವ್ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿತ್ತು.

ದಾಳಿ ವೇಳೆ ವಿಚಲಿತರಾದ ಆನಂದರಾವ್ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣವೇ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಅಜಂಖಾನ್‍ರನ್ನು ಜೈಲಿನಲ್ಲೇ ವಿಚಾರಣೆ ನಡೆಸಿರುವ ಅಧಿಕಾರಿಗಳು ಮತ್ತಷ್ಟು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ಉತ್ತರ ಪ್ರದೇಶದ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ವಿಚಾರಣೆ ಮತ್ತಷ್ಟು ಮಂದಿಯ ಕೊರಳಿಗೆ ಉರುಳಾಗಲಿದ್ದು, ಸಮಾಜವಾದಿ ಪಕ್ಷದ ವರ್ಚಸ್ಸಿಗೆ ಹಾನಿ ಮಾಡುವ ನಿರೀಕ್ಷೆ ಇದೆ. ಅಜಂಖಾನರನ್ನು ವಿಚಾರಣೆಗೆ ಒಳಪಡಿಸಲು ಪಿಎಂಎಲ್‍ಎ ನ್ಯಾಯಾಲಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಅವಕಾಶ ನೀಡಿತ್ತು.

Facebook Comments