ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಶಿವಸೇನೆ ಮುಖಂಡನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.27- ಶಿವಸೇನೆ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಅದೇ ಪಕ್ಷದ ಯುವ ನಾಯಕರೊಬ್ಬರ ಭೀಕರ ಕೊಲೆಯಾಗಿದೆ. ಅಷ್ಟಕ್ಕೂ ಕೊಲೆಯಾದವರು ಕನ್ನಡಿಗರು ಎನ್ನುವುದು ಗಮನಾರ್ಹ. ಈ ಕೊಲೆಯಿಂದ ಮಹಾರಾಷ್ಟ್ರ ಬೆಚ್ಚಿ ಬಿದ್ದಿದೆ. ಕೊಲೆಯಾದ ವ್ಯಕ್ಯಿಯನ್ನು ಶಿವಸೇನಾ ಯುವ ಘಟಕದ ಮಾಜಿ ಅಧ್ಯಕ್ಷ ರಾಹುಲ್ ಶೆಟ್ಟಿ (43) ಎಂದು ಗುರುತಿಸಲಾಗಿದೆ.
ರಾಹುಲ್ ಶೆಟ್ಟಿ ಅವರಿಗೆ ತಾಯಿ, ಪತ್ನಿ, ಒಬ್ಬ ಮಗ ಮತ್ತು ಮಗಳು ಇದ್ದಾರೆ.

ಕರ್ನಾಟಕ ಕರಾವಳಿ ಮೂಲದ ಇವರು ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಇವರ ತಂದೆಯನ್ನೂ ಕೆಲ ವರ್ಷಗಳ ಹಿಂದೆಯೇ ಹೀಗೆಯೇ ಕೊಲೆ ಮಾಡಲಾಗಿತ್ತು.

ಮಹಾರಾಷ್ಟ್ರದ ಲೊನಾವಾಲದಲ್ಲಿ ಕರ್ನಾಟಕ ಕರಾವಳಿ ಮೂಲದ ಶಿವಸೇನಾ ಮುಖಂಡರಾಗಿದ್ದ ದಿವಂಗತ ಉಮೇಶ ಶೆಟ್ಟಿಯ ಪುತ್ರ ರಾಹುಲ್ ಶೆಟ್ಟಿಯನ್ನು ಮನೆ ಮಂದೆಯೇ ಇರುವ ಟೀ ಸ್ಟಾಲ್ ನಲ್ಲಿ 3 ಬಾರಿ ಗುಂಡು ಹಾರಿಸಿ ನಂತರ ಇರಿದು ಕೊಲೆ ಮಾಡಲಾಗಿದೆ.

ಕೂಡಲೇ ರಾಹುಲ್ ಶೆಟ್ಟಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಭಾವಿ ಕನ್ನಡಿಗನ ಕೊಲೆಯಿಂದ ಲೋನಾವಾಲಾ ಪರಿಸರದ ಅಪಾರ ಸಂಖ್ಯೆಯ ಕನ್ನಡಿಗರು ಹಾಗೂ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಘಟನೆಯ ಸತ್ಯಾಸತ್ಯತೆ ಹೊರ ಬರಬೇಕಾಗಿದೆ.

Facebook Comments