ಶಿವಾಜಿನಗರದಲ್ಲಿ ಹೊಸಬರಿಗೆ ಚಾನ್ಸ್ ನೀಡುವಂತೆ ಕಾಂಗ್ರೆಸ್ ಮುಖಂಡರ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.6-ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಪ್ರಧಾನಕಾರ್ಯದರ್ಶಿಯಾಗಿದ್ದ ಎಸ್.ಎ.ಹುಸೇನ್ ಮತ್ತು ಬಿ.ಆರ್.ನಾಯ್ಡು ನೇತೃತ್ವದ ನಿಯೋಗ ನಿನ್ನೆ ನವದೆಹಲಿಗೆ ತೆರಳಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಅಹಮ್ಮದ್ ಪಟೇಲ್ ಮತ್ತಿತರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಈಗಾಗಲೇ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ರಿಜ್ವಾನ್ ಅರ್ಷದ್‌ಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ರಿಜ್ವಾನ್ ಅರ್ಷದ್ ಅವರಿಗೆ ಕಾಂಗ್ರೆಸ್ ಸಾಕಷ್ಟು ಅವಕಾಶಗಳನ್ನು ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಹಿರಿಯರನ್ನು ಕಡೆಗಣಿಸಿ ಟಿಕೆಟ್ ನೀಡಲಾಗಿತ್ತು. ಎರಡು ಬಾರಿಯೂ ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮತ್ತೆ ಅವರನ್ನು ವಿಧಾನಪರಿಷತ್‌ಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಈಗ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳುತ್ತಿದ್ದಾರೆ.

ಅವರಿಗೆ ಯಾವುದೇ ಕ್ಷೇತ್ರದ ಮೇಲೂ ಹಿಡಿತ ಇಲ್ಲ. ಹಾಗಿದ್ದರೂ ಪ್ರತಿ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದುಕೊಂಡು ಕಾಂಗ್ರೆಸ್ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಹೈಕಮಾಂಡ್‌ಗೆ ದೂರು ನೀಡಿದ್ದಾರೆ.

ಈ ಬಾರಿ ಉಪಚುನಾವಣೆ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದು, ಕಾಂಗ್ರೆಸ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಸೋಲಿಸದೆ ಇದ್ದರೆ ಮುಂದೆ ಪಕ್ಷಾಂತರಿಗಳಿಗೆ ಮಣೆ ಹಾಕಿದಂತಾಗುತ್ತದೆ. ಆ ಕಾರಣಕ್ಕಾಗಿ ಈ ಬಾರಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದು ಮುಖಂಡರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

Facebook Comments