ಶಿವಾಜಿನಗರದಲ್ಲಿ ಸರವಣ ಪರ ಸಿಎಂ ಯಡಿಯೂರಪ್ಪ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ವಿಧಾನಸಭೆ ಉಪಚುನಾವಣೆಗೆ ಕೇಸರಿ ಪಾಳಯದ ನಾಯಕರು ಬಿರುಸಿನ ಪ್ರಚಾರ ಮಾಡುತ್ತಿದ್ದು, ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಸರವಣ ಪರ ಸಿಎಂ ಬಿ.ಎಸ್. ಯಡಿಯೂರಪ್ಪ ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದರು.

ಶಿವಾಜಿನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಸಿಎಂ ಬಿಎಸ್‍ವೈ ಹಲಸೂರು ಕೆರೆ ಬಳಿ ಇರುವ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋಗೆ ಚಾಲನೆ ನೀಡಿ ನಂತರ ಸಾವಿರಾರು ಕಾರ್ಯಕರ್ತರ ಜೊತೆ ಶಿವಾಜಿ ನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು ಏಳು ಕಿಲೋಮೀಟರ್ ಅದ್ದೂರಿ ರೋಡ್ ಶೋ ನಡೆಸಿದರು.

ಇದೇ ಮೊದಲ ಬಾರಿಗೆ ಶಿವಾಜಿ ನಗರಕ್ಕೆ ಮತಯಾಚನೆಗೆ ಬಂದ ಸಿಎಂ ಯಡಿಯೂರಪ್ಪ ಅವರನ್ನು, ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಅದ್ದೂರಿ ಯಾಗಿ ಸ್ವಾಗತಿಸಿದರು. ರಸ್ತೆಯುದ್ದಕ್ಕೂ ಹೂವು ಚೆಲ್ಲಿ, ಹೂವಿನ ಮಾಲೆ ಹಾಕುತ್ತಾ ಬಿಜೆಪಿ ಪರ ಘೋಷಣೆ ಕೂಗುತ್ತಾ ಸಾಥ್ ನೀಡಿದರು.

ಹಲಸೂರು ಕೆರೆಬಳಿಯಿಂದ ಪ್ರಾರಂಭಗೊಂಡ ರೋಡ್ ಶೋ ಭಾರತಿ ನಗರದ ಮುತ್ಯಾಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಕೊನೆಗೊಂಡಿತು.ಈ ವೇಳೆ ಮಾತನಾಡಿದ ಸಿಎಂ, ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಅದ್ದೂರಿ ರೋಡ್ ಶೋ ನಡೆಸಿದ್ದೇವೆ. ಸಾವಿರಾರು ಜನ ನಮಗೆ ಬೆಂಬಲ ಸೂಚಿಸಿದ್ದಾರೆ. ಈ ಕ್ಷೇತ್ರದಲ್ಲಿ ತಿರುವಳ್ಳುವರ್ ಪ್ರತಿಮೆ ಪ್ರತಿಷ್ಠಾಪನೆ ಮಾಡಿರೋದು ನಮಗೆ ದೊಡ್ಡ ಶಕ್ತಿ ಬಂದಂತಾಗಿದೆ. 15 ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ, ಶಿವಾಜಿನಗರದಲ್ಲೂ ಗೆಲ್ಲುತ್ತೇವೆ.

ಶಿವಾಜಿನಗರದ ಜನ ನಮಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಒಂದು ಸ್ಥಿರ ಸರ್ಕಾರ ನಡೆಸುವುದಕ್ಕೆ ನಮಗೆ ಅವಕಾಶ ಮಾಡಿಕೊಡಬೇಕು. ಕ್ಷೇತ್ರದ ಅಭಿವೃದ್ಧಿಗೆ ನನ್ನೆಲ್ಲ ಶಕ್ತಿಮೀರಿ ಸರವಣ ಜೊತೆ ಕೆಲಸ ಮಾಡುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದರು.

ರೋಷನ್ ಬೇಗ್ ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್‍ವೈ,ರೋಷನ್ ಬೇಗ್ ನನ್ನ ಸಂಪರ್ಕದಲ್ಲಿ ಇಲ್ಲ. ನಾನು ರಾಜ್ಯ ಪ್ರವಾಸದಲ್ಲಿ ಬ್ಯುಸಿಯಾಗಿದ್ದೇನೆ. ಆದರೆ ಎಲ್ಲರು ಬೆಂಬಲ ಕೊಡುವಂತ ವಾತಾವರಣ ನಿರ್ಮಾಣವಾಗಿದೆ. ಖಂಡಿತವಾಗಿಯೂ ಸರವಣ ಸುಮಾರು 15 ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಹೇಳಿದರು.

Facebook Comments