ಕಾರ್ಯಾಧ್ಯಕ್ಷರ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆಶಿ ಸಮಾಲೋಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16-ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಕಾರ್ಯಾಧ್ಯಕ್ಷರ ಜತೆ ಸಭೆ ನಡೆಸಿದ್ದು, ರಾಜ್ಯವಾರು ಅಧಿಕಾರ ವ್ಯಾಪ್ತಿಯ ನಿಗದಿಗೆ ಸಮಾಲೋಚನೆ ನಡೆಸಿದ್ದಾರೆ. ದಿನೇಶ್‍ಗುಂಡೂರಾವ್ ನಂತರ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಹಿರಿಯ ನಾಯಕರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ.

ಈ ಮಧ್ಯೆ ಕಾರ್ಯಾಧ್ಯಕ್ಷರ ಕಾರ್ಯ ವ್ಯಾಪ್ತಿಯ ಬಗ್ಗೆ ಗೊಂದಲಗಳು ಉಂಟಾಗಿದ್ದವು. ನೂತನ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿಕೆಯೊಂದನ್ನು ನೀಡಿ ನೂತನ ಅಧ್ಯಕ್ಷರು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಬಾರದು ಹಾಗೂ ಮಾಡುವಂತಿಲ್ಲ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆರಂಭದಲ್ಲೇ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗುವುದನ್ನು ತಪ್ಪಿಸಲು ಸಭೆ ಕರೆಯಲಾಗಿತ್ತು.

ಕೆಪಿಸಿಸಿಗೆ ನಾಲ್ಕು ಮಂದಿಯನ್ನು ಕಾರ್ಯಾಧ್ಯಕ್ಷರನ್ನು ನೇಮಿಸಲಾಗುತ್ತದೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಮೂರು ಮಂದಿಯನ್ನು ಮಾತ್ರ ನೇಮಕ ಮಾಡಲಾಗಿದೆ. ಕಂದಾಯ ವಿಭಾಗವಾರು ನೇಮಕಾತಿ ಯಾಗಲಿದೆ. ಕಾರ್ಯಾಧ್ಯಕ್ಷರು ಆಯಾ ವಿಭಾಗಗಳ ಜವಾಬ್ದಾರಿ ನೋಡಿಕೊಳ್ಳುತ್ತಾರೆ ಎಂಬ ನಿರೀಕ್ಷೆಗಳು ಕೂಡ ಉಸಿಯಾಗಿದ್ದು, ಕಲಬುರ್ಗಿ ಕಂದಾಯ ವಿಭಾಗಕ್ಕೆ ಈಶ್ವರ್ ಖಂಡ್ರೆ ಮೊದಲಿನಿಂದಲೂ ಕಾರ್ಯಾಧ್ಯಕ್ಷರಾಗಿದ್ದಾರೆ. ಅವರನ್ನೇ ಹೈಕಮಾಂಡ್ ಮುಂದುವರೆಸಿದ್ದಾರೆ.

ಉಳಿದಂತೆ ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸಲಿಂ ಅಹಮ್ಮದ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ನೇಮಿಸಲಾಗಿದೆ. ಈ ಇಬ್ಬರು ಬೆಳಗಾವಿ ವಿಭಾಗಕ್ಕೆ ಸೇರ್ಪಡೆಯಾಗಲಿದ್ದು, ವಿಭಾಗವಾರು ಅಧಿಕಾರ ಹಂಚಿಕೆಯಲ್ಲಿ ಗೊಂದಲ ಉಂಟಾಗಿದೆ. ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗಗಳಿಗೆ ಕಾರ್ಯಾಧ್ಯಕ್ಷತೆ ಇಲ್ಲದಂತಾಗಿದೆ. ಹೀಗಾಗಿ ಕಂದಾಯ ವಿಭಾಗದ ಬದಲಿಗೆ ಘಟಕವಾರು ಜವಾಬ್ದಾರಿ ವಹಿಸಿ ಸಂಘಟನೆ ಬಲಪಡಿಸುವ ಕುರಿತು ಚರ್ಚೆಗಳು ನಡೆದಿವೆ.

ಕಾರ್ಯಾಧ್ಯಕ್ಷರನ್ನು ವಿಭಾಗವಾರು ಸೀಮಿತಗೊಳಿಸದೆ ಎಲ್ಲರೂ ರಾಜ್ಯವ್ಯಾಪಿ ಪ್ರವಾಸ ಮಾಡಿದರೆ ಮತ್ತಷ್ಟು ಗೊಂದಲವಾಗುವ ಆತಂಕವೂ ಪಕ್ಷದಲ್ಲಿ ಕಾಡುತ್ತಿದೆ. ಕಾರ್ಯಾಧ್ಯಕ್ಷರು ಭಿನ್ನ ಹೇಳಿಕೆಗಳನ್ನು ನೀಡಿ ಗೊಂದಲ ಉಂಟು ಮಾಡಬಾರದು ಎಂದು ಇಂದು ಡಿ.ಕೆ.ಶಿವಕುಮಾರ್ ಕಾರ್ಯಾಧ್ಯಕ್ಷರ ಜತೆ ಸಭೆ ನಡೆಸಿದ್ದಾರೆ.

Facebook Comments