ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ‘ವಿಡಿಯೋ ಲಿಂಕ್’ ಮಾಡಿದ ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.28- ರಾಜ್ಯದ ಒಬ್ಬ ಸಚಿವ ಮತ್ತು ಎಂಎಲ್‍ಸಿ ಒಬ್ಬರು ಸೇರಿ ಖಾಸಗಿ ವಿಡಿಯೋವೊಂದನ್ನು ದೆಹಲಿಯ ಬಿಜೆಪಿ ನಾಯಕರಿಗೆ ತಲುಪಿಸಿದ್ದರಿಂದ ಬೇಸರಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಉತ್ತರ ಕನ್ನಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ವಿಡಿಯೋವನ್ನು ಸಂತೋಷ್ ಎಂಎಲ್‍ಸಿ ಹಾಗೂ ಸಚಿವರೊಬ್ಬರಿಗೆ ಕೊಟ್ಟಿದ್ದರು ಎಂದು ಎರಡು ಮೂರು ತಿಂಗಳ ಹಿಂದೆಯೇ ನನಗೆ ಮಾಹಿತಿ ಬಂದಿತ್ತು. ಆ ವಿಡಿಯೋವನ್ನು ಎಂಎಲ್‍ಸಿ ಮತ್ತು ಸಚಿವರು ನೆನ್ನೆ ಮೊನ್ನೆ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಕೊಟ್ಟಿದ್ದಾರೆ.

ಇದರಿಂದ ಸಂತೋಷ್ ಬೇಸರಗೊಂಡಿದ್ದರು ಎಂದು ತಿಳಿದುಬಂತು. ಅದು ಎಷ್ಟು ನಿಜನೋ ಸುಳ್ಳೋ ಗೊತ್ತಿಲ್ಲ. ಅದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು. ಆ ವಿಡಿಯೋ ಇಟ್ಟುಕೊಂಡು ಎಂಎಲ್‍ಸಿ ಮತ್ತು ಸಚಿವ ಸೇರಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವರನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದರು ಎಂದು ನನಗೆ ಹಲವಾರು ಮಂದಿ ಫೆÇೀನ್ ಮಾಡಿ ತಿಳಿಸಿದ್ದರು.

ಸತ್ಯಾಂಶ ಏನು ಎಂದು ಗೋತ್ತಿಲ್ಲ. ತನಿಖೆಯಾಗಲಿ, ಆತ್ಮಹತ್ಯೆಗೆ ಪ್ರಯತ್ನಿಸಿದವರು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಯಾಗಿರುವುದರಿಂದ ರಾಜ್ಯ ಸರ್ಕಾರದವರು ತನಿಖೆ ನಡೆಸಬಾರದು. ಬೇರೆ ರೂಪದ ಉನ್ನತ ತನಿಖೆಯಾಗಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

# ಕೇಸು ದಾಖಲಿಸಲಿ:
ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಮಾದಕ ವಸ್ತುಗಳ ದ್ರವ್ಯದ ಹಣದಿಂದ ನಡೆಯುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರಿಗೆ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ಕಿಡಿಕಾರಿದರು.

ನಳೀನ್ ಕುಮಾರ್ ಕಟೀಲ್ ಗೌರವಯುತವಾಗಿ ನಡೆದುಕೊಳ್ಳುತ್ತಾರೆ, ರಾಜಕೀಯ ಪರಿಜ್ಞಾನ ಇದೆ. ಜವಾಬ್ದಾರಿಯುತವಾಗಿ ಮಾತನಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅವರ ಹೇಳಿಕೆಯಿಂದ ಜನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಮೇಲಿನ ಗೌರವವನ್ನು ಕಳೆದುಕೊಳ್ಳುವಂತಾಗಿದೆ ಎಂದು ಡಿ.ಕೆ.ಶಿವಕುಮಾರ್ ವಿಷಾದಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರ ಮಾದಕ ವಸ್ತುಗಳ ದ್ರವ್ಯದ ಹಣದಲ್ಲೇ ನಡೆದಿದೆ ಎಂದು ಗೋತ್ತಾಗಿದ್ದರೆ ಇನ್ನೂ ಯಾಕೆ ಎಫ್‍ಐಆರ್ ಹಾಕಿಲ್ಲ. ನಾನು ಕೂಡ ಆಗ ಸಚಿವನಾಗಿದ್ದೆ, ನಾನು ಕೂಡ ಭಾಗಿದಾರನಾಗುತ್ತೇನೆ. ಈಗ ನಿಮ್ಮ ಪಕ್ಷಕ್ಕೆ ಬಂದಿರುವ ಹಲವರು ಕೂಡ ಸಿದ್ದರಾಮಯ್ಯ ಸರ್ಕಾರದಲ್ಲಿ ಪಾಲುದಾರರಾಗಿದ್ದರು. ಅವರು ಭಾಗಿಯಾಗಿದ್ದರು ಎಂದರ್ಥವಲ್ಲವೇ.  ನಿಮ್ಮ ಆರೋಪ ನಿಜವಾಗಿದ್ದರೆ, ತಾಕತ್ತಿದ್ದರೆ ಕೇಸು ದಾಖಲಿಸಿ ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.

ಬಿಜೆಪಿಯ ಆಂತರಿಕ ಬೆಳವಣಿಗೆಯಲ್ಲಿ ನಾವು ಮೂಗು ತೂರಿಸುವುದಿಲ್ಲ. ನಮಗೂ ಅದಕ್ಕೂ ಸಂಬಂಧವೂ ಇಲ್ಲ. ನಮ್ಮಲ್ಲಿ ಇದ್ದ ಕೆಲವರು ಅಲ್ಲಿಗೆ ಹೋಗಿದ್ದಾರೆ. ಅವರು ನಮ್ಮಲ್ಲಿ ಇದ್ದಾಗ ನಾವು ಏನು ಅನುಭವಿಸಿದ್ದೇವೋ, ಅದನ್ನೇ ಬಿಜೆಪಿಯವರು ಈಗ ಅನುಭವಿಸುತ್ತಾರೆ ಎಂದರು.

ಮೊದಲು ನಾವು ನಮ್ಮ ಮನೆಯನ್ನು ಸರಿ ಪಡಿಸಿಕೊಳ್ಳುತ್ತೇವೆ. ಅಕ್ಕಾಗಿ ನಾನು ರಾಜ್ಯ ಪ್ರವಾಸ ಆರಂಭಿಸಿದ್ದೇನೆ. ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳು, ಹಲವಾರು ಉಪಚುನಾವಣೆಗಳು ಬರುತ್ತಿವೆ. ಅದಕ್ಕೆ ನಮ್ಮ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಹಾಗಾಗಿ ಎಲ್ಲಾ ಜಿಲ್ಲೆಗಳಿಗೂ ಹೋಗಿ ಕಾರ್ಯಕರ್ತರು ಮತ್ತು ಮುಖಂಡರನ್ನು ಭೇಟಿ ಮಾಡುತ್ತಿದ್ದೇನೆ ಎಂದರು.

ನಮ್ಮ ಪಕ್ಷದ ಸರ್ಕಾರ ಇದ್ದಾಗ ಉತ್ತರ ಕನ್ನಡ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಆದರೆ ಚುನಾವಣೆಯಲ್ಲಿ ಫಲಿತಾಂಶ ನಮ್ಮ ಪರವಾಗಿ ಬಂದಿಲ್ಲ. ಜಿಲ್ಲೆಯಲ್ಲಿ ಒಬ್ಬರೆ ಒಬ್ಬ ಶಾಸಕರು ಮಾತ್ರ ಕಾಂಗ್ರೆಸ್‍ಗಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಏನು ಮಾಡಬೇಕು ಎಂದು ಯೋಚಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.

ಕಾಂಗ್ರೆಸ್‍ನಲ್ಲಿ ಇನ್ನು ಮುಂದೆ ಕೆಲಸ ಮಾಡುವವರನ್ನು ಉಳಿಸಿಕೊಳ್ಳುತ್ತೇವೆ. ಕೆಲಸ ಮಾಡದಿದ್ದವರನ್ನು ಮನೆಗೆ ಕಳುಹಿಸಿ, ಕೆಲಸ ಮಾಡುವವರಿಗೆ ಅವಕಾಶ ನೀಡುತ್ತೇವೆ. ಬೂತ್ ಮಟ್ಟದಿಂದಲೂ ಪಕ್ಷ ಸಂಘಟನೆಗೆ ಹೊಸ ರೂಪ ಕೊಡುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಉತ್ತರ ಕನ್ನಡ ಜಿಲ್ಲೆಯ ಮುಖಂಡರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ಸಮುದ್ರದಲ್ಲಿ ದೋಣಿ ವಿಹಾರ ನಡೆಸಿದರು.

Facebook Comments