ಬೆಳಗಾವಿಯಲ್ಲಿ ಡಿಕೆಶಿ ರಣತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಏ.8- ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಮಾಜಿ ಸಂಸದ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲ್‍ರನ್ನು ಭೇಟಿ ಮಾಡಿ ಬೆಂಬಲಯಾಚಿಸಿದ್ದಾರೆ. ಚಿಕ್ಕಬಾಗೇವಾಡಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಒಂದೇ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಹಾಗೂ ಕಾರ್ಮಿಕ ನೀತಿಗಳನ್ನು ರೂಪಿಸಿವೆ. ಅದರ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದೆ. ಸಮಾಜದ ಎಲ್ಲರೂ ಈ ಹೋರಾಟಗಳಿಗೆ ಧ್ವನಿಗೂಡಿಸಬೇಕಿದೆ ಎಂದು ಕರೆ ನೀಡಿದರು. ಹೈಕಮಾಂಡ್‍ನ ಸೂಚನೆಯ ಮೇರೆಗೆ ಇಂದು ನಮ್ಮ ಪಕ್ಷದ ಇತರ ನಾಯಕರ ಜೊತೆಗೂಡಿ ಬಾಬಾಗೌಡ ಪಾಟೀಲ್‍ರನ್ನು ಭೇಟಿ ಮಾಡಿದ್ದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬಾಗೌಡ ಪಾಟೀಲರು, ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನೂರು ದಿನಗಳಿಗೂ ಹೆಚ್ಚು ಕಾಲ ಹೋರಾಟ ನಡೆಸಿದರೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಜೊತೆ ಏಕೆ ಮಾತುಕತೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವರು ರೈತರ ಜೊತೆ ಮಾತನಾಡಿದ್ದಾರೆ. ಒಂದು ಐತಿಹಾಸಿಕ ಹೋರಾಟ ನಡೆದಿದೆ, ಅದಕ್ಕೆ ಸ್ಪಂದಿಸಬೇಕು ಎಂದು ಪ್ರಧಾನಿಗೆ ಅನಿಸಿಲ್ಲ. ಇದನ್ನು ನಾನು ಬಿಜೆಪಿ ಸರ್ಕಾರ ಎಂದು ಕರೆಯುವುದಿಲ್ಲ. ಮೋದಿ ಅವರ ಸರ್ಕಾರ ಎಂದು ಕರೆಯುತ್ತೇನೆ. ಹೌದೋ ಅಲ್ಲವೋ ಎಂದು ಅಡ್ವಾಣಿ ಅವರನ್ನು ಕೇಳಿದರೆ ಹೇಳುತ್ತಾರೆ, ಪಾಪ ಅವರ ಬಾಯಿ ಮುಚ್ಚಿಸಿದ್ದಾರೆ ಎಂದು ವಿಷಾದಿಸಿದರು.

ಭಾರತದಲ್ಲಿ ಮಾನವ ಹಕ್ಕುಗಳು ಮತ್ತು ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿವೆ ಎಂದು ಇಂಗ್ಲೆಂಡ್‍ನ ಸಂಸತ್‍ನಲ್ಲಿ ಚರ್ಚೆ ಮಾಡಲು ಮುಂದಾದಾಗ ಇಲ್ಲಿನ ವಿದೇಶಾಂಗ ಇಲಾಖೆ ಇಂಗ್ಲೆಂಡ್‍ನ ರಾಯಭಾರಿಯನ್ನು ಕರೆದು ಭಾರತದ ಆಂತರಿಕ ವಿಚಾರವನ್ನು ಇಂಗ್ಲೆಂಡ್‍ನಲ್ಲಿ ಚರ್ಚಿಸಬಾರದು ಎಂದು ತಾಕೀತು ಮಾಡಿದ್ದಾರೆ. ಅದಕ್ಕೆ ಪ್ರತ್ಯುತ್ತರಿಸಿರುವ ಇಂಗ್ಲೆಂಡ್ ರಾಯಬಾರಿ ಮಾನವಹಕ್ಕುಗಳು ಮತ್ತು ಪತ್ರಿಕಾ ಸ್ವಾತಂತ್ರ ಯಾವುದೋ ಒಂದು ದೇಶದ ಆಂತರಿಕ ವಿಚಾರ ಅಲ್ಲ, ಅದು ಜಾಗತಿಕ ವಿಚಾರ ಎಂದು ಹೇಳಿದ್ದಾರೆ. ಭಾರತದ ಪರಿಸ್ಥಿತಿ ಅಷ್ಟು ಹದಗೆಟ್ಟಿದೆ ಎಂದು ಹೇಳಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು, ಮೋದಿಯನ್ನು ಕೆಳಗಿಳಿಸುವುದು ನಮ್ಮ ಗುರಿ ಅದಕ್ಕಾಗಿ ಜ್ಯಾತ್ಯತೀತ ಶಕ್ತಿಗಳ ಜೊತೆ ಕೈಜೊಡಿಸಲು ನಾವು ಸಿದ್ಧ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುವ ಕುರಿತಂತೆ ಕಾರ್ಯಕರ್ತರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್‍ಮೀಗಾ ಹಾಜರಿದ್ದರು.

Facebook Comments