ಮಹದಾಯಿ ಸಮಸ್ಯೆಗೆ ಸ್ಪಂದಿಸದ ಬಿಜೆಪಿ : ಡಿಕೆಶಿ ಕೆಂಡ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ನ.21- ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಸಂಸದರು, ಸಚಿವರು, ಶಾಸಕರು ಇದ್ದರೂ ಮಹದಾಯಿ ಬಗ್ಗೆ ಹೋರಾಟ ಮಾಡುತ್ತಿಲ್ಲ. ಅವರೆಲ್ಲ ಹೈಕಮಾಂಡ್‍ಗೆ ಹೆದರಿ ಬಾಯಿ ಬಿಡುತ್ತಿಲ್ಲ ಅವರೆಲ್ಲಾ ಸಾಮೂಹಿಕ ರಾಜೀನಾಮೆ ಕೊಡಲಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರು ಕಳೆದ ಹಲವಾರು ವರ್ಷಗಳಿಂದ ಮಹದಾಯಿ ನೀರಿಗಾಗಿ ಹೋರಾಟ ಮಾಡುತ್ತಾ ಬರುತ್ತಿದ್ದರೂ ಈ ಭಾಗದ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಸುರೇಶ್ ಅಂಗಡಿ ಮಹದಾಯಿ ನೀರು ತರಲು ಹೋರಾಟ ಮಾಡುತ್ತಿಲ್ಲ. ಅಲ್ಲದೇ ಮಾತನಾಡುವುದು ಇಲ್ಲ. ಅವರೆಲ್ಲಾ ಅಧಿಕಾರದಲ್ಲಿ ಇರಲು ಲಾಯಕ್ಕಿಲ್ಲ ಎಂದರು ಹರಿಹಾಯ್ದರು.

ಮಹದಾಯಿ ವಿಚಾರವಾಗಿ ನ್ಯಾಯಾಲಯದಲ್ಲಿ ತೀರ್ಪು ಬಂದರೂ ಗೆಜೆಟ್ ನೋಟಿಫೀಕೇಶನ್ ಮಾಡಬೇಕಿತ್ತು. ಬಿಜೆಪಿಯಲ್ಲಿ ಎಲ್ಲರಿಗೂ ಡಿಸಿಎಂ, ಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಾರೆ. ಮಹದಾಯಿ ನೀರು ವಿಚಾರವಾಗಿ ಸಣ್ಣ ಕೆಲಸ ಮಾಡೋಕ್ಕೆ ಆಗಲ್ವಾ ಎಂದು ಪ್ರಶ್ನಿಸಿದರು. ಅನರ್ಹ ಶಾಸಕರಿಗೆ ಅಧಿಕಾರ ಕೊಡುತ್ತೇನೆ ಎಂದು ಸಿಎಂ ಹೇಳುವುದು ಭ್ರಷ್ಟಾಚಾರ ಅಲ್ವಾ ಎಂದು ನೇರವಾಗಿ ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದಲ್ಲಿ ಏನು ಆಗಬಾರದಾಗಿತ್ತೋ ಅದನ್ನು ಬಿಜೆಪಿ ಮಾಡಿ ಮುಗಿಸಿ ಅಧಿಕಾರವನ್ನು ಪಡೆದಿದೆ ಎಂದರು. ಹುಬ್ಬಳ್ಳಿ ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ, ಶಹರ ಜಿಲ್ಲಾ ಅಧ್ಯಕ್ಷ ಅಲ್ತಾಪ್ ಹಳ್ಳೂರು, ಮಾಜಿ ಎಂಎಲ್‍ಸಿ ನಾಗರಾಜ ಛಬ್ಬಿ, ರಾಬರ್ಟ್ ದದ್ದಾಪುರಿ, ಶರಣಪ್ಪ ಕೊಟಗಿ, ಮೋಹನ ಹೊಸಮನಿ, ಸ್ರಿಂಗಾರಿ ಶಿವಲಿಂಗಪ್ಪ, ಪಾರಸಮಲ್ ಜೈನ್ ಸಾವಿರಾರು ಕಾರ್ಯಕರ್ತರು ಇದ್ದರು.

Facebook Comments