ಬಿಗ್ ನ್ಯೂಸ್: ಟ್ರಬಲ್ ಶೂಟರ್‌ ಡಿಕೆಶಿಗಿಲ್ಲ ಕೆಪಿಸಿಸಿ ಅಧ್ಯಕ್ಷ ಪಟ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮಾ.7- ಕಾಂಗ್ರೆಸ್‍ನಲ್ಲಿ ನಡೆಯುತ್ತಿದ್ದ ಭಾರೀ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮತ್ತು ಒಂದು ತಿಂಗಳು ವಿಳಂಬವಾಗುವ ಸಾಧ್ಯತೆ ಇದ್ದು ದಿನೇಶ್ ಗುಂಡೂರಾವ್ ಅವರೇ ಆವರೆಗೂ ಅಧ್ಯಕ್ಷರಾಗಿ ಮುಂದುವರೆಯುವ ನಿರೀಕ್ಷೆಗಳಿವೆ. ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಇನ್ನೇನು ಅಧಿಕೃತ ಆಯ್ಕೆ ಪ್ರಕಟಗೊಳ್ಳಲಿದೆ ಎಂಬ ಹೊತ್ತಿನಲ್ಲಿ ರಾಜ್ಯದ ಪ್ರಭಾವಿ ನಾಯಕರೊಬ್ಬರು ಪಕ್ಷ ತೊರೆಯುವ ಬೆದರಿಕೆ ಹಾಕಿದ್ದರು.

ಇದು ಹೈಕಮಾಂಡ್‍ನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇದರ ನಡುವೆ ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಕೆಲವು ಪ್ರಕರಣಗಳ ಕಾನೂನಿನ ತೊಡಕು ಅಡ್ಡಬಂದಿದ್ದು, ಹೈಕಮಾಂಡ್ ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ ಡೋಲಾಯಮಾನ ಸ್ಥಿತಿಯಲ್ಲಿ ಮುಂದುವರೆಯುವಂತೆ ಮಾಡಿದೆ.  ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ಅವರು ಆಕಾಂಕ್ಷಿ ಎಂಬ ಚರ್ಚೆಗಳು ಶುರುವಾಗಿದೆ. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹೈಕಮಾಂಡ್ ಕೊಡುವುದಾದರೆ ಕೆಲವು ಷರತ್ತುಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂನಬಿ ಆಜಾದ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.  ಚುನಾವಣೆ ಕಾಲ ಸಮೀಪಿಸುತ್ತಿದ್ದಂತೆ ನಿಮಗೆ ಪಕ್ಷದ ಸಾರಥ್ಯ ವಹಿಸಲಾಗುವುದು. ಸದ್ಯಕ್ಕೆ ಕಾನೂನು ತೊಡಕುಗಳಿಂದ ನೀವು ಹೊರಬನ್ನಿ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಸಹಕಾರ ನೀಡಿ ಎಂದು ಡಿಕೆಶಿ ಮನವೊಲಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಅಸಮಾಧಾನಗೊಂಡಿರುವ ಡಿ.ಕೆ.ಶಿವಕುಮಾರ್ ಪಕ್ಷದ ಸಭೆ, ಸಮಾರಂಭಗಳಿಂದ ದೂರ ಉಳಿದಿದ್ದಾರೆ. ಅಧಿವೇಶನಕ್ಕೂ ನಿಯಮಿತವಾಗಿ ಹಾಜರಾಗದೆ ಬಂಡಾಯದ ಬಾವುಟ ಹಿಡಿದಿದ್ದಾರೆ.  ಕಾಂಗ್ರೆಸ್‍ಗೆ ಇದು ನುಂಗಲಾರದ ತುತ್ತಾಗಿದೆ. ರಾಜಕೀಯ ಕಾರಣಗಳಿಗಾಗಿ ಆದಾಯ ತೆರಿಗೆ ದಾಳಿಗೆ ಒಳಗಾಗಿ ಜಾರಿನಿರ್ದೇಶನಾಲಯ ಪ್ರಕರಣದಲ್ಲಿ ಜೈಲಿಗೂ ಹೋಗಬಂದ ಡಿಕೆಶಿ ಅವರು ಕಷ್ಟ ಕಾಲದಲ್ಲೂ ಸಹ ಪಕ್ಷ ನಿಷ್ಠೆ ಬಿಡದೆ ಕಾಂಗ್ರೆಸ್‍ನ್ನು ನಂಬಿಕೊಂಡಿದ್ದಾರೆ. ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಭಾರೀ ಚರ್ಚೆಗಳು ನಡೆದಿದ್ದವು. ಪಕ್ಷದಲ್ಲಿ ಈ ಬಗ್ಗೆ ಹೊಸ ಹೊಸ ಬೆಳವಣಿಗೆಗಳು ಆಗಿದ್ದವು.

ಡಿ.ಕೆ.ಶಿವಕುಮಾರ್ ಅವರ ಹೆಸರು ಮುಂಚೂಣಿಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಎಂ.ಬಿ.ಪಾಟೀಲ್, ಸತೀಸ್ ಜಾರಕಿಹೊಳಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವು ಮಂದಿಯ ಹೆಸರುಗಳು ಮುಂಚೂಣಿಗೆ ಬಂದಿದ್ದವು. ಈಗ ಇದ್ದಕ್ಕಿದ್ದಂತೆ ಎಲ್ಲವೂ ತಿರುವುಮುರುಗಾಗಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ನಾಯಕತ್ವ ವಹಿಸಲು ಹೈಕಮಾಂಡ್ ಮೀನಾಮೇಷ ಎಣಿಸುತ್ತಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಹೊಸ ಮುಖಕ್ಕೆ ಪಕ್ಷದ ಸಾರಥ್ಯ ವಹಿಸುವ ವದಂತಿಗಳು ವ್ಯಾಪಕವಾಗಿವೆ. ಮುಂದಿನ ತಿಂಗಳು ಎಐಸಿಸಿ ಪುನಾರಚನೆ ನಡೆಯಲಿದ್ದು, ಪಕ್ಷಕ್ಕೆ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಲಿದ್ದಾರೆ. ಆ ಬಳಿಕ ಕೆಪಿಸಿಸಿಗೂ ನಾಯಕನ ಆಯ್ಕೆ ನಡೆಯಲಿದೆ ಎಂಬ ಮಾಹಿತಿ ಇದೆ.  ಒಂದು ವೇಳೆ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾದರೆ ಮತ್ತೆ ಸಿದ್ದರಾಮಯ್ಯ ಅವರ ಕೈ ಮೇಲಾಗಲಿದ್ದು, ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗುವುದು ಕಷ್ಟಸಾಧ್ಯವಾಗಲಿದೆ.

Facebook Comments