ಸಿಬಿಐನ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಿ ಬರುತ್ತೇನೆ: ಡಿಕೆ ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.24- ತಾವು ಸಿಬಿಐ ವಿಚಾರಣೆಗೆ ಹೋದ ವೇಳೆ ನನ್ನ ಪರವಾಗಿ ಯಾರೂ ಸಿಬಿಐ ಕಚೇರಿ ಬಳಿ ಬರಬಾರದು ಮತ್ತು ಹೇಳಿಕೆಗಳನ್ನು ನೀಡಬಾರದರು. ಸಿಬಿಐನ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸಿ ಬರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕಲ್ಬುರ್ಗಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಜ್ಯದಲ್ಲಿ ಯಾವ ಶಾಸಕನ ವಿರುದ್ಧವೂ ಸಿಬಿಐ ತನಿಖೆಗೆ ಅನುಮತಿ ನೀಡಿಲ್ಲ.  ಅಕ್ರಮ ಆಸ್ತಿ ಹೊಂದಿರುವ ಮಾಜಿ ಸಚಿವರು, ಸಚಿವರ ಸೇರಿ ದೊಡ್ಡ ಪಟ್ಟಿಯೇ ಇದೆ. ಆದರೆ ಯಾರ ವಿರುದ್ಧವೂ ಸಿಬಿಐ ತನಿಖೆಗೆ ಅನುಮತಿ ನೀಡಿಲ್ಲ. ನನ್ನ ವಿರುದ್ಧ ಮಾತ್ರ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈಗ ತನಿಖೆಯೂ ನಡೆಯುತ್ತಿದೆ ಎಂದರು.

ನಮ್ಮ ವಿರುದ್ಧ ರಾಜಕೀಯ ದ್ವೇಷ ಉಕ್ಕಿ ಹರಿಯುತ್ತಿದೆ. ಸಿಬಿಐ ಅಧಿಕಾರಿಗಳು ನಮ್ಮಂತವರ ಪ್ರಕರಣದಲ್ಲಿ ಜಾಗೃತರಾಗಿ ಕೆಲಸ ಮಾಡುತ್ತಿದ್ದಾರೆ. ಸಿಬಿಐ ನಮ್ಮ ಪರವಾಗಿ ಕೆಲಸ ಮಾಡುವುದು ಬೇಡ. ಕಾನೂನು ಪ್ರಕಾರ ನಡೆದುಕೊಂಡರೆ ಸಾಕು. ನಾನು ಯಾವ ತಪ್ಪನ್ನು ಮಾಡಿಲ್ಲ. ಸ್ನೇಹಿತರು, ಬಂಧುಗಳು, ಹಿತೈಷಿಗಳು, ಕಾರ್ಯಕರ್ತರು ತಲೆ ತಗ್ಗಿಸುವಂತಹ ತಪ್ಪು ಮಾಡಿಲ್ಲ ಎಂದು ಹೇಳಿದರು.

ಸಿಬಿಐ ಕೇಳುವ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸುತ್ತೇನೆ. ನನ್ನ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ. ಸಿಬಿಐ ವಿಚಾರಣೆಗಾಗಿ ನಾನು ಸಿಬಿಐ ಕಚೇರಿಗೆ ಹೋದಾಗ ಅಲ್ಲಿಗೆ ಯಾರು ಬರಬೇಡಿ. ಡಿ.ಕೆ.ಶಿವಕುಮಾರ್‍ಗೆ ಏನೋ ಆಗಿ ಬಿಡುತ್ತದೆ ಎಂಬ ಆತಂಕ ಬೇಡ. ಸಿಬಿಐ ವಿರುದ್ಧ ಹೇಳಿಕೆಗಳನ್ನು ನೀಡಬೇಡಿ. ರಾಜಕೀಯ ದ್ವೇಷದಿಂದ ನಡೆಯುತ್ತಿರುವ ಎಲ್ಲಾ ವಿಚಾರಣೆ ಮತ್ತು ಹುನ್ನಾರಗಳನ್ನು ಎದುರಿಸಿ ಗೆದ್ದು ಬರುವೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಈ ಹಿಂದೆ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಗೆದ್ದಿದೆ. ಹಿಂದೆ ಏನೆಲ್ಲಾ ದುರ್ಬಳಕೆ ಮಾಡಿಕೊಂಡು ಬಿಜೆಪಿಯವರು ಗೆದ್ದಿದ್ದಾರೆ ಎಂಬ ಅನುಭವ ನಮಗೆ ಆಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಅಕಾರ ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಎಚ್ಚರಿಕೆಯಿಂದ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಚುನಾವಣೆ ವೇಳೆ ನೀಡಿದ್ದರು ಭರವಸೆಗಳನ್ನು ಈಡೇರಿಸಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದು ಸೇರಿದಂತೆ ಹಲವಾರು ಮಾತುಗಳನ್ನು ತಪ್ಪಿದೆ ಎಂದು ಹೇಳಿದರು.

ಮಸ್ಕಿಯಲ್ಲಿ ನಿನ್ನೆ ಸುಮಾರು 35 ಸಾವಿರ ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಡಿಮೆ ಮತಗಳ ಅಂತರದಿಂದ ಸೋಲು ಕಂಡ ಬಸವರಾಜ್ ತುರುವಿಹಾಳ್ ಅವರು ನಿನ್ನೆ ಕಾಂಗ್ರೆಸ್ ಸೇರ್ಪಡೆಯಾಗಿದ್ಧಾರೆ. ಅವರ ಗೆಲುವಿಗೆ ಸಹಕರಿಸಿದ 35 ಸಾವಿರ ಮಂದಿ ನಿನ್ನೆ ಬಿಜೆಪಿ ತೊರೆದು ಕಾಂಗ್ರೆಸ್ ಸೆರ್ಪಡೆಯಾಗಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

Facebook Comments