“ಜಾತಿಜನಗಣತಿಯಲ್ಲಿ ಅದೇನು ಅಡಗಿದೆಯೋ ನನಗೆ ಗೊತ್ತಿಲ್ಲ” : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.11- ಜಾತಿ ಜನಸಂಖ್ಯೆ ಗುರುತಿಸುವ ಉದ್ದೇಶದಿಂದ ನಡೆಸಲಾದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಪ್ರಕಟಣೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ 165 ಕೋಟಿ ರೂ.ಗಳನ್ನು ಖರ್ಚು ಮಾಡಿ ವರದಿ ತಯಾರಿಸಲಾಗಿದೆ. ಅದರಲ್ಲಿ ಏನು ಅಡಗಿದೆಯೋ ಎಂಬುದು ನನಗೆ ಗೊತ್ತಿಲ್ಲ.

ವರದಿ ತಯಾರಿಸಿದ ಕಾಂತರಾಜು ಅವರ ಬಳಿಯೇ ಒಮ್ಮೆ ನಾನು ಮಾತನಾಡಿದ್ದೆ, ವರದಿಯಲ್ಲಿ ಏನಿದೆ ಎಂದು ಕೇಳಿದಾಗ ನನ್ನ ಅಧಿಕಾರಾವಧಿ ಪೂರ್ಣಗೊಂಡಿತ್ತು. ಹಾಗಾಗಿ ಎಲ್ಲಾ ಕಾಗದ ಪತ್ರಗಳನ್ನು ಆಯೋಗಕ್ಕೆ ಸಲ್ಲಿಸಿದ್ದೇನೆ. ನನ್ನ ಬಳಿಯೂ ಪೂರ್ಣ ಮಾಹಿತಿ ಇಲ್ಲ ಎಂದು ಕಾಂತರಾಜು ಹೇಳಿದರು. ಹಾಗಾಗಿ ವರದಿಗಳಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದಿದ್ದಾರೆ.

ವರದಿ ಅಂಗೀಕಾರಗೊಳ್ಳಬೇಕೇ, ಬೇಡವೇ ಎಂಬ ಕುರಿತಂತೆ ನಾನೊಬ್ಬನೇ ಅಭಿಪ್ರಾಯ ಹೇಳಲು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷನಾಗಿ ಎಲ್ಲಾ ನಾಯಕರ ಜತೆ ಚರ್ಚೆ ಮಾಡಬೇಕಿದೆ. ಈ ಹಿಂದೆ ನಮ್ಮ ಸರ್ಕಾರ ವಿದ್ದಾಗಲೇ ಸಮೀಕ್ಷೆ ನಡೆದಿತ್ತು. ಆ ವೇಳೆ ಏಕೆ ಅದನ್ನು ಅಂಗೀಕರಿಸಲಿಲ್ಲ. ಅನಂತರ ನಮ್ಮ ಪಕ್ಷದ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಏಕೆ ಅಂಗೀಕಾರಗೊಳ್ಳಲಿಲ್ಲ. ಏನೆಲ್ಲಾ ಅಡ್ಡಿ ಅಡಚಣೆಗಳ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಸದ್ಯಕ್ಕೆ ಆ ಚರ್ಚೆ ಬೇಡ ಎಂದು ಹೇಳಿದ್ದಾರೆ.

ಬಿಜೆಪಿ ವರದಿಯ ಬಗ್ಗೆ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಕಾದು ನೋಡಬೇಕಿದೆ. ಈ ಹಿಂದೊಮ್ಮೆ ಶಾಸನ ಸಭೆಯಲ್ಲಿ ಸದಸ್ಯರು ಪ್ರಶ್ನೆ ಕೇಳಿದಾಗ ವರದಿ ಬಗ್ಗೆ ನಮಗೆ ಗೊತ್ತೇ ಇಲ್ಲ. ನಮಗೆ ವರದಿ ಸಿಕ್ಕೇ ಇಲ್ಲ ಎಂದು ಸರ್ಕಾರ ಹೇಳಿದೆ. ಹಾಗಿದ್ದರೆ ಅಷ್ಟು ಹಣ ಏನಾಯಿತು? ಸಂಬಂಧಪಟ್ಟವರಿಗೆ ಕ್ರೆಡಿಟ್ ಆಗಿದೆಯೇ ಇಲ್ಲವೇ ಎಂಬೆಲ್ಲ ವಿಷಯಗಳು ಚರ್ಚೆಯಾಗಬೇಕು ಎಂದರು.

ಜಾತಿ ಜನಸಂಖ್ಯೆಯನ್ನು ನಿಖರವಾಗಿ ಗುರುತಿಸುವ ಸಲುವಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಾಯಿತು. ಕಾಂತರಾಜು ಅವರ ಆಯೋಗ ವರದಿ ಸಿದ್ದಪಡಿಸಿ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸಲ್ಲಿಕೆ ಮಾಡಿದೆ. ಈ ವರದಿ ಅಂಗೀಕಾರಗೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಒಕ್ಕೂಟ ಕಳೆದ ವರ್ಷ ಆಂದೋಲನ ರೂಪಿಸಲು ಮುಂದಾಗಿತ್ತು. ಆದರೆ, ಕೋವಿಡ್‍ನ ಕಾರಣದಿಂದಾಗಿ ಹೆಚ್ಚು ಕಾರ್ಯಕ್ರಮಗಳು ನಡೆಯದೆ ಕೆಲವು ಆಯ್ದ ಸಮಾರಂಭಗಳು ಮತ್ತು ಸಂವಾದಗಳು ನಡೆದವು. ಅದರಲ್ಲಿ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾಗವಹಿಸಿ ಬೇಡಿಕೆಗೆ ದನಿಗೂಡಿಸಿದ್ದರು.

ಈಗ ಮತ್ತೊಮ್ಮೆ ವಿಷಯ ಮುನ್ನೆಲೆಗೆ ಬಂದಿದ್ದು, ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಮುಖರು ರಾಜ್ಯಾದ್ಯಂತ ಅಭಿಯಾನ ನಡೆಸಲು ಮುಂದಾಗಿದ್ದಾರೆ. ನಿನ್ನೆ ಆಡಳಿತ ಮತ್ತು ಪ್ರತಿಪಕ್ಷದ ಪ್ರಮುಖರನ್ನು ಭೇಟಿ ಮಾಡಿ ಮನವಿಗಳನ್ನು ಸಲ್ಲಿಸಿದ್ದಾರೆ. ವರದಿ ಬಹಿರಂಗವಾಗಬೇಕು ಎಂಬ ಬೇಡಿಕೆಗೆ ಸಿದ್ದರಾಮಯ್ಯ ಒತ್ತಾಸೆಯಾಗಿದ್ದಾರೆ. ಅವರ ಆಪ್ತ ಮುಖಂಡರೇ ಬಹಳಷ್ಟು ಮಂದಿ ಅಭಿಯಾನದ ನೇತೃತ್ವ ವಹಿಸಿದ್ದಾರೆ.

ಆದರೆ, ಕಾಂಗ್ರೆಸ್‍ನ ಬಹಳಷ್ಟು ನಾಯಕರು ವರದಿ ಅಂಗೀಕಾರಕ್ಕೆ ತೆರೆಮರೆಯಲ್ಲಿ ವಿರೋಧ ವ್ಯಕ್ತಪಡಿಸಿರುವುದು ಗುಟ್ಟೇನಲ್ಲ.
ಕೆಲವು ಸಾಮುದಾಯಿಕ ಹಿತಾಸಕ್ತಿಗಳಿಂದ ವರದಿ ಅವೈಜ್ಞಾನಿಕ ಎಂಬ ಆಕ್ಷೇಪಗಳು ಇವೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದೆ ಇಂದು ಜಾರಿಕೊಂಡಿದ್ದಾರೆ.

Facebook Comments