ಈಶ್ವರಪ್ಪ ಯಾರಿಗೆ ನಿಷ್ಠರಾಗಿದ್ದಾರೆ..? : ಡಿಕೆಶಿ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.2- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರು ಪಕ್ಷಕ್ಕೆ ನಿಷ್ಠರಾಗಿರಬಹುದು. ಆದರೆ ಮುಖ್ಯಮಂತ್ರಿಯವರಿಗಲ್ಲ. ರಾಜ್ಯಪಾಲರಿಗೆ ಪತ್ರ ಬರೆದ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡದೆ ಮುಖ್ಯಮಂತ್ರಿಯವರು ತಮ್ಮ ತಪ್ಪನ್ನು ತಾವೇ ಒಪ್ಪಿಕೊಂಡು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರು ಯಡಿಯೂರಪ್ಪ ವಿರುದ್ಧ ವಿವಿಧ ಸೆಕ್ಷನ್‍ಗಳನ್ನು ಉಲ್ಲೇಖ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇಂದು ಮಾತನಾಡಿ, ನಾನು ಬಂಡಾಯವೆದ್ದಿಲ್ಲ. ನಿಷ್ಠನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರು ಯಾರಿಗೆ ನಿಷ್ಠರಾಗಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಈಶ್ವರಪ್ಪ ಅವರನ್ನು ಮಂತ್ರಿ ಮಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ. ಪ್ರಮಾಣ ವಚನ ಬೋಧಿಸಿದ್ದು ರಾಜ್ಯಪಾಲರು, ಸಚಿವರಾಗಿ ಅವರು ನಿಷ್ಠರಾಗಿರಬೇಕಾಗಿದ್ದು ಯಡಿಯೂರಪ್ಪ ಅವರಿಗೆ. ಆದರೆ ಅವರ ವಿರುದ್ಧವೇ ಪತ್ರ ಬರೆದಿದ್ದಾರೆ. ಹಾಗಿದ್ದರೆ ಅವರ ನಿಷ್ಠೆ ಯಾರಿಗೆ ಎಂದು ಪ್ರಶ್ನಿಸಿದರು.

ಈಶ್ವರಪ್ಪ ಪಕ್ಷಕ್ಕೆ ನಿಷ್ಠರಾಗಿರಬಹುದು. ಆದರೆ ಮುಖ್ಯಮಂತ್ರಿಯವರಿಗಲ್ಲ. ಈ ಪ್ರಕರಣದಲ್ಲಿ ಆಡಳಿತಾತ್ಮಕ ವೈಫಲ್ಯ ಗಂಭೀರ ಸ್ವರೂಪವಾಗಿ ಎದ್ದು ಕಾಣುತ್ತಿದೆ. ಪತ್ರ ಬರೆದಿರುವ ಈಶ್ವರಪ್ಪ ಅವರನ್ನು ಈವರೆಗೂ ಸಂಪುಟದಿಂದ ವಜಾಗೊಳಿಸದೆ ಇರುವುದು ಏಕೆ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದು , ಒಂದು ವೇಳೆ ಅವರನ್ನು ಸಂಪುಟದಲ್ಲಿ ಮುಂದುವರೆಸಿದರೆ ತಮ್ಮ ತಪ್ಪನ್ನು ತಾವೇ ಒಪ್ಪಿಕೊಂಡಂತಾಗುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.

ಇವರು ಪತ್ರ ಬರೆಯದೆ ಇದ್ದರೆ ನಾವ್ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ. ಒಂದು ವೇಳೆ ನಮ್ಮ ಸ್ಥಾನದಲ್ಲಿ ವಿರೋಧ ಪಕ್ಷದ ನಾಯಕರಾಗಿ ಅವರುಗಳಿದ್ದರೆ ಮಾತನಾಡದೆ ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನೆಯೊಂದಕ್ಕೆ ತಿರುಗೇಟು ನೀಡಿದರು. ಕೊರೊನಾ ನಿಯಂತ್ರಣಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ರೂಪಿಸುತ್ತಿದೆ. ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸರ್ಕಾರ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಎಲ್ಲರೂ ಪಾಲಿಸಬೇಕು. ತಮಗೆ ಬೇಕಾದವರು ಮನಸೋ ಇಚ್ಛೆ ನಡೆದುಕೊಳ್ಳಬಹುದು. ವಿರುದ್ಧವಾಗಿರುವವರು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂಬ ಸರ್ಕಾರದ ನಿಲುವು ಒಪ್ಪಿತವಲ್ಲ. ಇದರ ವಿರುದ್ಧ ನಾವು ರಾಜಕೀಯವಾಗಿಯೇ ನಾವು ಹೋರಾಟ ಮಾಡುತ್ತೇವೆ ಎಂದರು.

ನಾಳೆಯಿಂದ ಕೇರಳದಲ್ಲಿ 5 ಕಡೆ ಚುನಾವಣಾ ಪ್ರಚಾರ ಮಾಡುತ್ತೇನೆ. ಬಳಿಕ ಕರ್ನಾಟಕದಲ್ಲಿ ನಡೆಯುವ 1 ಲೋಕಸಭೆ, 2 ವಿಧಾನಸಭಾ ಕ್ಷೇತ್ರಗಳ ಪ್ರಚಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು. ಸಿಡಿ ಪ್ರಕರಣದಲ್ಲಿ ಹಣಕಾಸಿನ ವಹಿವಾಟು ನಡೆದಿದ್ದು, ಅದನ್ನು ಜಾರಿ ನಿರ್ದೇಶನಾಲಯದ ತನಿಖೆ ನಡೆಸುವಂತೆ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು ಈ ಮೊದಲು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರು ಆಪರೇಷನ್ ಕಮಲಕ್ಕಾಗಿ ತಮಗೆ ಹಣ ನೀಡಿದ ಬಗ್ಗೆ ಹೇಳಿಕೆ ನೀಡಿದ್ದಾರೆ. ಮೊದಲು ಅದರ ಬಗ್ಗೆ ತನಿಖೆಯಾಗಲಿ. ಬಳಿಕ ಉಳಿದ ವಿಚಾರಗಳ ಬಗ್ಗೆ ಮಾತನಾಡೋಣ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Facebook Comments