ನಾವು ಯಾವ ಪಕ್ಷವನ್ನೂ ಒಡೆಯುವುದಿಲ್ಲ: ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ನಾವು ಯಾವುದೇ ಪಕ್ಷವನ್ನು ಒಡೆಯುವ ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್‍ನ ಸಿದ್ದಾಂತ ಮತ್ತು ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಬರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸಂಜಯ್‍ನಗರದ ಕುವೆಂಪು ಮೈದಾನದಲ್ಲಿ ಹೆಬ್ಬಾಳ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಿಂದ ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಅನೇಕ ನಾಯಕರನ್ನು ಬರಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಸೇರಲು ಬಿಜೆಪಿ ಹಾಗೂ ಜೆಡಿಎಸ್‍ನ ಹಲವಾರು ಮಂದಿ ಅರ್ಜಿ ಹಾಕಿದ್ದಾರೆ. ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಅರ್ಜಿಗಳನ್ನು ಪರಿಶೀಲಿಸುತ್ತಿದೆ. ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ನಾವು ಯಾವುದೇ ಪಕ್ಷ ಒಡೆಯಲು ಕೈ ಹಾಕುವುದಿಲ್ಲ. ಕಾಂಗ್ರೆಸ್‍ನ 20 ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಆ ಪಕ್ಷದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹೇಳಿದ್ದಾರೆ. 20 ಅಲ್ಲ 40 ಮಂದಿಯನ್ನು ಸೇರಿಸಿಕೊಳ್ಳಿ. ನಮ್ಮ ತಕರಾರಿಲ್ಲ. ಕಾಂಗ್ರೆಸ್ ಪಕ್ಷವನ್ನು ಯಾರು ಏನು ಮಾಡಲು ಸಾಧ್ಯವಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಕಾರ ಹಿಡಿಯಲಿದೆ ಎಂದು ಹೇಳಿದರು.

ಬಿಜೆಪಿಯವರಿಗೆ ಚುನಾವಣೆ ಗೆಲ್ಲುವ ವಿಶ್ವಾಸ ಇದ್ದಿದ್ದೇ ಆದರೆ ಮುಖ್ಯಮಂತ್ರಿ ಬದಲಾಯಿಸಿದ್ದೇಕೆ ? ಯಡಿಯೂರಪ್ಪ ಅವರ ಬದಲಾಗಿ ಬಸವರಾಜ ಬೊಮ್ಮಾಯಿ ಅವರನ್ನು ಯಾವ ಕಾರಣಕ್ಕಾಗಿ ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಅಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಯಾವುದಾದರು ಹೊಸ ಕಾರ್ಯಕ್ರಮ ರೂಪಿಸಿದೆಯೇ? ಉಚಿತ ಶಿಕ್ಷಣ, ಉದ್ಯೊಗ ಸೇರಿದಂತೆ ಯಾವುದಾದರೂ ಕಾರ್ಯಕ್ರಮ ರೂಪಿಸಿರುವ ಉದಾಹರಣೆಗಳಿವೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನ ಶಕ್ತಿ ದೇಶದ ಶಕ್ತಿ. ಪಕ್ಷ ಸಂಘಟನೆ ಹೊಸ ಯುಗಕ್ಕೆ ಕಾಲಿಡುತ್ತಿದೆ. ಎಲ್ಲೆಡೆ ಕಾಂಗ್ರೆಸ್ ಧ್ವಜದ ಬಣ್ಣಗಳು ತುಂಬಿ ತುಳುಕುತ್ತಿವೆ. ಬೆಲೆ ಏರಿಕೆ, ಜನವಿರೋ ನೀತಿಗಳಿಂದಾಗಿ ಬಿಜೆಪಿ ಜನಾಕ್ರೋಶಕ್ಕೆ ಗುರಿಯಾಗಿದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ಬೈರತಿ ಸುರೇಶ್, ಕೃಷ್ಣಬೈರೇಗೌಡ, ಮಾಜಿ ಸಚಿವರಾದ ಎಂ.ಆರ್.ಸೀತಾರಾಮ್ ಸೇರಿದಂತೆ ಅನೇಕ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು. 2018ರ ವಿಧಾನಸಭೆಯಲ್ಲಿ ಪರಾಜಿತಗೊಂಡ ಜೆಡಿಎಸ್ ಅಭ್ಯರ್ಥಿ ಹನುಮಂತೇಗೌಡ, ಮಾಜಿ ಉಪಮಹಾಪೌರ ಎಂ.ಆನಂದ್, ಜಿಪಂ ಮಾಜಿ ಸದಸ್ಯ ಟಿ.ಕೆ.ಗೋಪಾಲಪ್ಪ, ಟಿ.ಜಿ.ಚಂದ್ರು ಇದೇ ವೇಳೆ ಕಾಂಗ್ರೆಸ್ ಸೇರ್ಪಡೆಯಾದರು.

Facebook Comments