ಮತ ಹಾಕಿದವರಿಗೆ ಲಸಿಕೆ ನೀಡುವುದು ಬಿಟ್ಟು, ದೊಡ್ಡಸ್ತಿಕೆಗಾಗಿ ವಿದೇಶಕ್ಕೆ ರಫ್ತು ಮಾಡಿದ್ದಾರೆ: ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.21- ಕೊರೊನಾ ಲಸಿಕೆಯನ್ನು ಮೊದಲು ಮತ ಹಾಕಿ ಅಧಿಕಾರ ನೀಡಿದ ದೇಶದ ಜನರಿಗೆ ನೀಡುವ ಬದಲು ದೊಡ್ಡಸ್ತಿಕೆಗಾಗಿ ವಿದೇಶಗಳಿಗೆ ರಫ್ತು ಮಾಡಿ ನಮ್ಮ ಜನರನ್ನು ನರಳುವಂತೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಬಳಲಿರುವ ಜನರಿಗೆ ಆರ್ಥಿಕತೆಯ ಮೂಲಕ ಶಕ್ತಿ ತುಂಬಬೇಕಿತ್ತು. ಆದರೆ, ಅದು ಯಾವುದೂ ಆಗಿಲ್ಲ. ನಿನ್ನೆ ಪ್ರಧಾನಮಂತ್ರಿಯವರ ಭಾಷಣ ಪ್ರವಚನದಂತಿತ್ತು. ಈಗ ಲಸಿಕೆ ಆಂದೋಲನದ ಬಗ್ಗೆ ಮಾತನಾಡುತ್ತಿದ್ದಾರೆ. ತೆರಿಗೆ ಕಡಿತದ ಪ್ರಸ್ತಾಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇವರ ದೊಡ್ಡಸ್ತಿಕೆಗಾಗಿ ಕೊರೊನಾ ಲಸಿಕೆ ಹಾಗೂ ಔಧಿಷಯನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ಇಲ್ಲಿ ನಮ್ಮ ಜನ ನರಳುತ್ತಿದ್ದಾರೆ. ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಯಾವ ಕೆಲಸಗಳು ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಬೇಜವಾಬ್ದಾರಿಯಿಂದ ನಡೆದುಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಸಚಿವರು ಜನರಿಗೆ ಮುಖ ತೋರಿಸಲಾಗದೆ ನಿನ್ನೆ ಸರ್ವಪಕ್ಷ ಸಭೆಯ ಬಳಿಕ ಮುಖ್ಯಕಾರ್ಯದರ್ಶಿಯವರಿಂದ ಹೇಳಿಕೆ ಕೊಡಿಸುತ್ತಿದ್ದಾರೆ. ಈ ಮೊದಲೆಲ್ಲಾ ಸಚಿವರು ಅಥವಾ ಮುಖ್ಯಮಂತ್ರಿಗಳೇ ಹೇಳಿಕೆ ಕೊಡುತ್ತಿದ್ದರು. ಈಗ ಮುಖ್ಯ ಕಾರ್ಯದರ್ಶಿಗಳಿಂದ ಮಾತನಾಡಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಅಘೋಷಿತವಾದ ರಾಜ್ಯಪಾಲರ ಆಡಳಿತವಿದೆ. ಪ್ರಧಾನಿ ಹೇಳಿದರು ಎಂಬ ಕಾರಣಕ್ಕಾಗಿ ರಾಜ್ಯಪಾಲರು ಸರ್ವಪಕ್ಷಗಳ ಸಭೆ ನಡೆಸಿರುವುದು ಸರಿಯಲ್ಲ. ಇವರಿಗೆ ರಾಜ್ಯಪಾಲರಿಂದಲೇ ಆಡಳಿತ ಮಾಡಿಸಲೇಬೇಕು ಎಂದಿದ್ದರೆ ಸಂವಿಧಾನದಿಂದ ತಿದ್ದುಪಡಿ ತನ್ನಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಸೋಂಕು ಹೆಚ್ಚಾಗಿರುವ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. ಇವರಿಗೆ ಆಡಳಿತದ ಅನುಭವದ ಕೊರತೆ ಇರುವುದರಿಂದ ಸಮಸ್ಯೆಗಳು ಹೆಚ್ಚಾಗಿವೆ. ರಾಜ್ಯದಲ್ಲಿ 200 ಐಎಎಸ್, 400 ಕೆಎಎಸ್ ಅಕಾರಿಗಳಿದ್ದಾರೆ. ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ಯಾವ ಸಚಿವರೂ ಕೋವಿಡ್ ಸ್ಥಳಗಳಿಗೆ ಭೇಟಿ ನೀಡಿಲ್ಲ, ಸೋಂಕಿತರ ಸಮಸ್ಯೆ ಕೇಳಲಿಲ್ಲ, ಆಸ್ಪತ್ರೆಗಳ ಸೌಲಭ್ಯ ನೋಡಲಿಲ್ಲ ಎಂದು ಹೇಳಿದರು.

ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗೂ ಗೌರವಯುತವಾದ ಸೌಲಭ್ಯ ಕಲ್ಪಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಎಲ್ಲಾ ಊರುಗಳ ಹೊರಗಡೆ ಕನಿಷ್ಠ 10 ಎಕರೆ ಜಾಗ ಮೀಸಲಿಟ್ಟು ಅಲ್ಲಿ ಅರಣ್ಯ ಇಲಾಖೆಯಿಂದ ಎರಡು ಲೋಡ್ ಸೌದೆ ಪೂರೈಸಿದ್ದರೆ ಸಾಕಿತ್ತು. ಜನ ಹೇಗೋ ಶವ ಸಂಸ್ಕಾರ ಮಾಡಿಕೊಳ್ಳುತ್ತಿದ್ದರು. ಇವರಿಗೆ ಯಾವುದೂ ಮಾಡಲು ಗೊತ್ತಿಲ್ಲ. ಸೌಜನ್ಯವಿಲ್ಲದ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರು ಸರ್ಕಾರ ರೂಪಿಸುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲನೆ ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

Facebook Comments