ಮುನಿರತ್ನ ಕಣ್ಣೀರಿನ ಅಸಲಿ ಕಾರಣ ಹೇಳಿದ ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.29- ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ತಮ್ಮ ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕಾಗಿ ವ್ಯಥೆಪಟ್ಟು ಕಣ್ಣೀರು ಹಾಕಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಚರ್ಚ್‍ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಸುಮಾ ಅವರ ಕಣ್ಣೀರೇ ಬೇರೆ, ಮುನಿರತ್ನ ಅವರ ಕಣ್ಣೀರೇ ಬೇರೆ.

ಕುಸುಮಾ ಅವರು ತಮ್ಮ ಜೀವನದಲ್ಲಿ ನೊಂದು-ಬೆಂದು ಆ ಸಂಕಟಕ್ಕಾಗಿ ಕಣ್ಣೀರು ಹಾಕಿದ್ದಾರೆ. ಮುನಿರತ್ನ ಅವರ ಕಣ್ಣೀರಿಗೆ ಬಹುಶಃ ಅವರ ಆತ್ಮಸಾಕ್ಷಿಯೇ ಕಾರಣ ಇರಬಹುದು ಎಂದರು. ಈ ಹಿಂದೆ ಕಾಂಗ್ರೆಸ್ ಪಕ್ಷವೇ ನನ್ನ ಉಸಿರು, ಜೀವ ಎಂದು ಹೇಳಿದ್ದರು. ಅದಕ್ಕೆ ವಿರುದ್ಧವಾಗಿ ನಡೆದುಕೊಂಡರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುನಿರತ್ನ ವಿರುದ್ಧ ಕೇಸು ದಾಖಲಿಸಿದ್ದಾರೆ. ಪ್ರಧಾನಮಂತ್ರಿಯವರು ಮುನಿರತ್ನ ವಿರುದ್ಧ ಭಾಷಣ ಮಾಡಿದ್ದಾರೆ. ಇದನ್ನೆಲ್ಲಾ ನೆನಪಿಸಿಕೊಂಡು ನಾನು ಮನಃಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇನೆ ಎಂಬ ನೋವಿನಿಂದ ಮುನಿರತ್ನ ಕಣ್ಣೀರು ಹಾಕಿರಬಹುದು. ಏನೇ ಆದರೂ ಮುನಿರತ್ನ ಒಳ್ಳೆಯ ನಟ, ನಿರ್ಮಾಪಕ ಎಂದು ಅಭಿಪ್ರಾಯಪಟ್ಟರು.

ಕಪಾಲಿಬೆಟ್ಟ ಏಸುಬೆಟ್ಟವೋ, ಕಾಲಬೈರವೇಶ್ವರನಬೆಟ್ಟವೋ ಎಂದು ಬಿಜೆಪಿಯವರು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ಧರ್ಮ, ಧಾರ್ಮಿಕ ವಿಚಾರಗಳ ಬಗ್ಗೆ ಚರ್ಚೆ ಬೇಡ. ಉಪ ಚುನಾವಣೆ ಮುಗಿಯಲಿ. ನ.3ರ ಬಳಿಕ ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದರು.

ಬಿಜೆಪಿಯವರ ಪ್ರಶ್ನೆಗಿಂತಲೂ ಮೊದಲು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ಸದಾನಂದಗೌಡರು ಮಾಡಿರುವ ಭಾಷಣಕ್ಕೆ ಈಗಲೂ ಬಿಜೆಪಿ ನಾಯಕರು ಬದ್ಧರಾಗಿದ್ದಾರೆಯೇ ಅಥವಾ ಬದಲಾವಣೆಯಾಗಿದ್ದಾರೆಯೇ ಎಂಬುದಕ್ಕೆ ಉತ್ತರ ನೀಡಲಿ. ಪ್ರಮುಖವಾಗಿ ಆ ವಿಷಯ ಚರ್ಚೆಯಾಗಲಿ ಎಂದು ಹೇಳಿದರು.

Facebook Comments