ಸಂಪತ್‍ರಾಜ್ ವಿರುದ್ಧ ಕ್ರಮಕ್ಕೆ ಡಿಕೆಶಿ ಹಿಂದೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ಶಾಸಕ ಅಖಂಡ ಶ್ರೀನಿವಾಸಮೂರ್ತಿ ದೂರು ನೀಡಿದ ಹೊರತಾಗಿಯೂ ಬಂತ ಮಾಜಿ ಮೇಯರ್ ಸಂಪತ್‍ರಾಜ್ ವಿರುದ್ಧ ಕ್ರಮ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿಂದೇಟು ಹಾಕಿದ್ದಾರೆ. ಇಂದು ಸದಾಶಿವನಗರದ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭೇಟಿ ಮಾಡಿ ಸಂಪತ್‍ರಾಜ್ ವಿರುದ್ಧ ಲಿಖಿತ ದೂರು ನೀಡಿದರು.

ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆ ಪ್ರಕರಣ, ಅದರ ಮಧ್ಯದಲ್ಲಿ ನನ್ನ ಮನೆಗೆ, ಕೆಜಿಹಳ್ಳಿ, ಡಿಜೆಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿದೆ. ಘಟನೆ ಹಿಂದೆ ಸಂಪತ್ ರಾಜ್ ಸೇರಿದಂತೆ ಕಾಂಗ್ರೆಸ್‍ನ ಬಿಬಿಎಂಪಿ ಮಾಜಿ ಸದಸ್ಯರ ಕೈವಾಡವಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಸಂಪತ್‍ರಾಜ್ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ.

ಇನ್ನೊಬ್ಬ ಮಾಜಿ ಕಾಪೆರ್ರೇಟರ್ ಜಾಕೀರ್ ಹುಸೇನ್‍ನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇವರಿಂದ ಪಕ್ಷದ ವರ್ಚಸ್ಸಿಗೂ ಹಾನಿಯಾಗಿದೆ ಎಂದು ಅಖಂಡ ಶ್ರೀನಿವಾಸ್‍ಮೂರ್ತಿ ದೂರು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸಮೂರ್ತಿ, ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಸಂಪತ್‍ರಾಜ್ ಮತ್ತು ಜಾಕೀರ್ ವಿರುದ್ಧ ಕ್ರಮಕ್ಕೆ ದೂರು ನೀಡಿದ್ದೇನೆ. ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಒಬ್ಬರ ಹೇಳಿಕೆಯನ್ನು ಆಧರಿಸಿ ಏಕಾಏಕಿ ಕ್ರಮತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‍ನಲ್ಲಿ ಶಿಸ್ತು ಸಮಿತಿ ಇದೆ. ಅಲ್ಲಿ ವಿಚಾರಣೆ ನಡೆಸಿ ನಂತರ ನಿರ್ಧಾರ ಮಾಡುತ್ತೇವೆ. ಪೊಲೀಸರ ತನಿಖೆ ಯಾವ ರೀತಿ ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ಸರ್ಕಾರ ಮತ್ತು ಬಿಜೆಪಿಯವರು ಪೊಲೀಸರ ಮೇಲೆ ಒತ್ತಡ ಹೇರಿ ಕೇಸು ದಾಖಲಿಸಿದ್ದಾರೆ ಎಂದು ಹೇಳಿದರು.

ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಅನ್ಯಾಯವಾಗಿದೆ ಎಂಬುದು ನಮಗೂ ಗೊತ್ತಿದೆ. ಅದಕ್ಕಾಗಿ ತೀವ್ರ ವಿಷಾದವಿದೆ. ಅವರಿಗೆ ನ್ಯಾಯ ಸಿಗಬೇಕಿದೆ ಎಂದರು. ಸಂಪತ್‍ರಾಜ್ ವಿಷಯದಲ್ಲಿ ಅತಿರೇಖದ ವೈಭವೀಕರಣ ಮಾಡಿ ಮಾಧ್ಯಮಗಳು ಕಾಂಗ್ರೆಸ್ ಪಕ್ಷದ ವರ್ಚಸ್ಸು ಹಾಳುಮಾಡುತ್ತಿದೆ ಎಂದು ದೂರಿದರು.

ಅಖಂಡ ಶ್ರೀನಿವಾಸಮೂರ್ತಿ ಅವರು ಸಂಪತ್‍ರಾಜ್ ಅವರನ್ನು ಉಚ್ಛಾಟಿಸಿ ಎಂದು ನೀಡಿರುವ ದೂರನ್ನು ಶಿಸ್ತುಪಾಲನಾ ಸಮಿತಿಗೆ ಕಳುಹಿಸುವುದಾಗಿ ಇದೇ ವೇಳೆ ಡಿ.ಕೆ.ಶಿವಕುಮಾರ್ ತಿಳಿಸಿದರು.

Facebook Comments