ಬಣ್ಣದ ಮಾತುಗಳ ಹಿಂದಿರುವ ಅಪಾಯದ ಬಗ್ಗೆ ಜಾಗೃತರಾಗಿ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.26- ಪೆಟ್ರೋಲ್, ಡೀಸೆಲ್, ಸಿಮೆಂಟ್, ಕಬ್ಬಿಣ ಸೇರಿದಂತೆ ಎಲ್ಲಾ ದರಗಳು ಏರಿಕೆಯಾಗಿವೆ. ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆ. ಇನ್ನು ಮುಂದಾದರೂ ಬಣ್ಣದ ಮಾತುಗಳ ಹಿಂದಿರುವ ಅಪಾಯವನ್ನು ಅರಿತುಕೊಳ್ಳಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಲಹೆ ಮಾಡಿದರು. ಕಾಂಗ್ರೆಸ್ ಕಚೇರಿಯಲ್ಲಿಂದು ಏರ್ಪಡಿಸಲಾಗಿದ್ದ 72ನೇ ವರ್ಷದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದರು.

ಹಿರಿಯರ ತ್ಯಾಗ, ಬಲಿದಾನ, ಹೋರಾಟಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನ ಅಂಗೀಕರಿಸಿ 72 ವರ್ಷಗಳ ಗಣ ರಾಜ್ಯದಲ್ಲಿ ಸೋದರತೆ, ಸಮಾನತೆಯ ಆಧಾರದ ಮೇಲೆ ಜಾತಿ, ಧರ್ಮ, ಲಿಂಗ ಮರೆತು ಒಟ್ಟಾಗಿ ಬದುಕುತ್ತಿದ್ದೇವೆ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲೂ ನಮ್ಮನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆದಾಳುವ ಪ್ರಯತ್ನ ನಡೆದಿತ್ತು. ಅದಕ್ಕೆ ದೇಶದ ಜನ ಅವಕಾಶ ನೀಡಲಿಲ್ಲ ಎಂದು ಹೇಳಿದರು.

ಸ್ವಾತಂತ್ರ್ಯದ ಬಳಿಕ ಸಾಕಷ್ಟು ಅಭಿವೃದ್ಧಿಯಾಗಿದೆ. ಚಂದ್ರನ ಬಳಿಗೆ ಉಪಗ್ರಹ ಕಳುಹಿಸಲಾಗಿದೆ. ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಕೃಷಿ, ಕೈಗಾರಿಕೆಗಳಿಗೆ ಸಮಾನ ಆದ್ಯತೆ ನೀಡಲಾಗಿತ್ತು. ದೇಶ ವೇಗವಾಗಿ ಅಭಿವೃದ್ಧಿ ಕಾಣುತ್ತಿತ್ತು ಎಂದರು. ದೇಶಭಕ್ತಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕ್ಕೆ ಸೀಮಿತವಾಗಬಾರದು. ಧಾರ್ಮಿಕ ಹಬ್ಬಗಳಂತೆ ಸಂಭ್ರಮದಿಂದ ಆಚರಿಸಬೇಕು. ಪ್ರತಿಯೊಬ್ಬರಲ್ಲೂ ದೇಶ ಭಕ್ತಿ ಮೂಡಿಸಲು ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಶ್ರಮ ವಹಿಸಬೇಕೆಂದು ಹೇಳಿದರು.

ರಾಷ್ಟ್ರ ಇಂದು ಕವಲು ದಾರಿಯಲ್ಲಿದೆ. ಐಕ್ಯತೆ, ಸಮಗ್ರತೆ, ಶಾಂತಿಗೆ ಧಕ್ಕೆ ಬಂದಿದೆ. ಪೌರತ್ವ ತಿದ್ದುಪಡಿ ಮೂಲಕ ಭಾರತೀಯ ಪ್ರಜೆಗಳು ಎಂದು ಹೇಳಿಕೊಳ್ಳಲು ವೈಯಕ್ತಿಕ ಗುರುತು ಹಾಜರಿಪಡಿಸಬೇಕೆಂದು ಹೇಳಿದಾಗ ದೇಶದ ಉದ್ದಗಲಕ್ಕೂ ಜನ ಸಾಮಾನ್ಯರು ರೊಚ್ಚಿಗೆದ್ದು ಪ್ರತಿಭಟಿಸಿದರು. ಇಂದು ರೈತರು ಬೀದಿಗಿಳಿದಿದ್ದಾರೆ. ವಿಶ್ವದಲ್ಲಿ ಪ್ರಜಾಪ್ರಭುತ್ವದ ಮಾದರಿ ರಾಷ್ಟ್ರವಾಗಿರುವ ಭಾರತದ ಸಂಸತ್‍ನಲ್ಲಿ ಯಾವುದೇ ಚರ್ಚೆ ಮಾಡದೆ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ.

ಏಕಪಕ್ಷವಾಗಿ ಅನುಮೋದನೆ ಪಡೆದ ಕಾನೂನುಗಳನ್ನು ವಿರೋಧಿಸಿ ರೈತರು ಹೋರಾಟಕ್ಕಿಳಿದಿದ್ದಾರೆ. ಕಾರ್ಮಿಕರು ಕೂಡ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸಂವಿಧಾನ ವಿರೋಧಿ ನಿಲುವುಗಳನ್ನು ಪ್ರತಿಭಟಿಸಲು ದೆಹಲಿಯಲ್ಲಿ ಎರಡು ಲಕ್ಷ ಟ್ರ್ಯಾಕ್ಟರ್‍ಗಳಲ್ಲಿ ರೈತರು ಸುಮಾರು 45 ಕಿ.ಮೀ. ಉದ್ದ ಸಾಲುಗಟ್ಟಿ ನಿಂತಿದ್ದಾರೆ.

ಮಾಧ್ಯಮಗಳು ಇವುಗಳನ್ನು ಸರಿಯಾಗಿ ಪ್ರೋತ್ಸಾಹಿಸುತ್ತಿಲ್ಲ. ಸಾಮಾಜಿಕ ಜಾಲತಾಣದಿಂದ ಮಾತ್ರ ತಿಳಿದು ಬರುತ್ತಿದೆ. ಕೇಂದ್ರ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದರೂ ಕೂಡ ಫಲ ನೀಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ದೇಶದ ರಕ್ಷಣೆಗಾಗಿ ಧ್ವನಿ ಎತ್ತುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕಾಗಿ ರೈತರ ಹೋರಾಟಕ್ಕೆ ನಾವೆಲ್ಲ ಬೆಂಬಲ ನೀಡಬೇಕು. ದೇಶದಲ್ಲಿಂದು ಭಾರೀ ಬದಲಾವಣೆಯಾಗಿದೆ. ಎಲ್ಲಾ ವಸ್ತುಗಳ ದರಗಳು ಏರಿಕೆಯಾಗಿವೆ. ಜನ ಸಾಮಾನ್ಯರ ಕೂಗಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಹಿಂದೆ ಸ್ವಾತಂತ್ರ್ಯಕ್ಕಾಗಿ ಪೂರ್ವಜರು ಹೋರಾಟ ಮಾಡಿದರು. ಇಂದು ಸ್ವತಂತ್ರ ಭಾರತದಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುವ ಪರಿಸ್ಥಿತಿ ಎದುರಾಗಿದೆ. ಜಾತಿ, ಧರ್ಮ ರಾಜ್ಯ ರಾಜ್ಯಗಳ ನಡುವೆ ಸಂಘರ್ಷ ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ದೃವನಾರಾಯಣ್, ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಗೋವಿಂದರಾಜು, ಯು.ಬಿ.ವೆಂಕಟೇಶ್ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.

Facebook Comments