16 ಕೋಟಿ ವೆಚ್ಚದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.19- ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 16 ಕೋಟಿ ವೆಚ್ಚದ ಕಂಚಿನ ಪುತ್ಥಳಿಯನ್ನು ಮುಂದಿನ ತಿಂಗಳು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂದೇಶ ಕಳಿಸಿದ್ದಾರೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ಸಿದ್ಧಗಂಗಾ ಮಠದಲ್ಲಿ ಆಯೋಜಿಸಿದ್ದ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಸುಗಳು, ವಸ್ತು ಪ್ರದರ್ಶನ ಸೇರಿದಂತೆ ರೈತರ ಬಗ್ಗೆ ನಿರಂತರವಾಗಿ ಹಗಲಿರುಳು ಶ್ರಮಿಸಿದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸುವಂತೆ ಕೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.

ಸರ್ವಧರ್ಮದ ಹೆಸರಿನಲ್ಲಿ ಶ್ರೀಗಂಧದಂತೆ ಇಡೀ ವಿಶ್ವದಲ್ಲಿ ತಮ್ಮ ವರ್ಚಸ್ಸನ್ನು ಮೂಡಿಸಿ ಶ್ರೀಗಳು ಜಂಗಮ ಜ್ಯೋತಿಯಾಗಿದ್ದಾರೆ ಎಂದು ಬಣ್ಣಿಸಿದರು. ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಲಿಂಗೈಕ್ಯ ಸ್ವಾಮೀಜಿಗಳ ಸೇವೆ ಅನನ್ಯ ಎಂದು ಅವರು ಹೇಳಿದರು. ಕಾನೂನು ಸಚಿವ ಡಾ.ಜೆ.ಮಾಧುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಯಾವತ್ತೂ ಉಳ್ಳವರ ಬಗ್ಗೆ ಮಾತನಾಡುತ್ತಿರಲಿಲ್ಲ. ನಿರಂತರವಾಗಿ ಕಡು ಬಡವರ ಬಗ್ಗೆ ಚಿಂತನೆ ಮಾಡುತ್ತಿದ್ದರು.

ಬಸವಣ್ಣನವರ ಅನುಯಾಯಿಗಳಾಗಿದ್ದ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ. ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಡೆಯಲ್ಲೇ ಸಾಗುತ್ತಿದ್ದಾರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ ಬದುಕಿನ ಕಾಲಘಟ್ಟದಲ್ಲಿ ದೈವ ಸ್ವರೂಪಿಯಾಗಿದ್ದವರು.

ಜಾತ್ಯತೀತವಾಗಿ ಸೇವೆ ಮಾಡಿದವರು. ಬಹಳಷ್ಟು ಜನರು ರಾಜಕೀಯವಾಗಿ ತಮ್ಮ ಸ್ವಾರ್ಥಕ್ಕೆ ಬದುಕಿದ್ದೇ ಜಾಸ್ತಿ. ಜಾತೀಯತೆ, ಅಸ್ಪೃಶ್ಯತೆ ಹೆಸರಿನಲ್ಲಿ ಬದುಕಿದವರು ಮಠಪತಿಗಳು. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಕೇವಲ ಮಠಪತಿಗಳಾಗದೆ ಜನಪತಿಯಾಗಿ ಬದುಕಿದವರು ಎಂದು ಬಣ್ಣಿಸಿದರು. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಜಯೇಂದ್ರ ಮಾತನಾಡಿ, ಕೈಲಾಸ ದೊಡ್ಡದಲ್ಲ. ಕಾಯಕ ದೊಡ್ಡದು ಎಂಬುದನ್ನು ತೋರಿಸಿಕೊಟ್ಟವರು ಶ್ರೀ ಶಿವಕುಮಾರ ಸ್ವಾಮೀಜಿ ಅವರು. ನಡೆದಾಡುವ ದೇವರ ಧೂಳಿನಲ್ಲಿ ಬದುಕಿರುವ ನಾವೆಲ್ಲರೂ ಪುಣ್ಯವಂತರು ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸಂಸ್ಕಾರ ಎಲ್ಲಿದೆ ಅಂದರೆ ಅದು ಸಿದ್ಧಗಂಗಾ ಮಠದಲ್ಲಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಏಕೆ ಬೇಕು, ನಮಗೆ ಅವರೇ ಭಾರತ ರತ್ನ. ಜಗತ್ತಿನಲ್ಲಿ ಯಾರೂ ಮಾಡದ ಸಾಧನೆಯನ್ನು ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಾಡಿದ್ದಾರೆ ಎಂದು ಬಣ್ಣಿಸಿದರು.
ನಂತರ ನವದೆಹಲಿಯ ಮುಖೇಶ್‍ಸಿಂಗ್ ಗರ್ಗ್ ಉಗ್ರ ನಿಗ್ರಹ ದಳದ ಮಹೀಂದರ್‍ಸಿಂಗ್ ಬಿಟ್ಟಾ ಅವರನ್ನು ಸನ್ಮಾನಿಸಲಾಯಿತು.

Facebook Comments