ಕಾಯಕ ಯೋಗಿಯ ಗದ್ದುಗೆ ಮೇಲೆ  ಶಿವಲಿಂಗ ಪ್ರತಿಷ್ಠಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು :  ಮಾನವತೆಯಿಂದ ದೈವತ್ವದೆಡೆಗೆ ಸಾಗಿದ ತ್ರಿವಿಧ ದಾಸೋಹಿ, ಶತಾಯುಷಿ, ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಪವಿತ್ರ ಗದ್ದುಗೆ ಮೇಲೆ ವಿಶೇಷವಾದ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಇಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಯ ಪೀಠದ ಮೇಲೆ ಶಿವಲಿಂಗವನ್ನು ಹಲವು ಮಠಾಧೀಶರ ಸಾನಿಧ್ಯದಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

ಈಗಾಗಲೇ ಲಿಂಗವನ್ನು ಶ್ರೀಗಳು ತಂಗುತ್ತಿದ್ದ ಹಳೆ ಮಠದಲ್ಲಿ ಮಂಡಳದ 48 ದಿನಗಳ ಕಾಲ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ ಹಾಗೂ ಶಯನಾಧಿವಾಸದ ವಿಧಿ-ವಿಧಾನಗಳನ್ನು ಪೂರೈಸಲಾಗಿತ್ತು. ಹೀಗೆ ಸಕಲ ವಿಧಾನ ಪೂರೈಸಿ ದೈವೀ ಶಕ್ತಿಯನ್ನು ಪಡೆದ ಪವಿತ್ರ ಲಿಂಗವನ್ನು ಶ್ರೀಗಳ ಗದ್ದುಗೆಯ ಪೀಠದ ಮೇಲೆ ಇರಿಸಲಾಗಿದೆ.

ಪ್ರಾತಃಕಾಲದಿಂದಲೇ ಹಲವು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ಶಿವಲಿಂಗವನ್ನು ದೈವೀಕರಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಸಿದ್ಧಗಂಗಾ ಪೀಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಹಲವು ಸಾಧು-ಸಂತರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಶಿವಲಿಂಗ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು.

ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು 27 ಇಂಚು ಉದ್ದವಿದೆ. ಶಿವಕುಮಾರ ಶ್ರೀಗಳ ಕೈಯಲ್ಲಿನ ಗೇಣು 9 ಇಂಚು ಇತ್ತು. ಆ ಗೇಣಿನ ಮೂರು ಪಟ್ಟು ಲಿಂಗವನ್ನು ರೂಪಿಸಲಾಗಿದೆ. ಪಾನ ಬಟ್ಟಲು ಸೇರಿ ಪೂರ್ಣವಾಗಿ ಲಿಂಗ 38 ಇಂಚು ಇದೆ.

ಲಿಂಗ ಪ್ರತಿಷ್ಠಾಪನಾ ಕಾರ್ಯಕ್ರಮ ಕಣ್ತುಂಬಿ ಕೊಳ್ಳಲು ನಾಡಿನ ವಿವಿಧೆಡೆಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಸಂಸದ ಜಿ.ಎಸ್.ಬಸವರಾಜು, ಸ್ಥಳೀಯ ರಾಜಕೀಯ ಮುಖಂಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Facebook Comments