ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ, ಸರ್ಕಾರವನ್ನು ವಜಾಗೊಳಿಸಬೇಕು : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 28- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚಾರಕ್ಕೆ ಅಡ್ಡಿಪಡಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ಸ್ಪಷ್ಟವಾಗಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಶಿರಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ, ಚುನಾವಣಾ ಅಧಿಕಾರಿಗಳು, ಪೊಲೀಸರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜರಾಜೇಶ್ವರಿನಗರದಲ್ಲಿ ಕೊಲೆಗಳು ಆಗುತ್ತವೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ. ಕೊಲೆ ಅನ್ನುವ ಪದವನ್ನು ಏಕೆ ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಅವರ ಮನಸ್ಸಿನಲ್ಲಿರುವುದು ಹೊರಗೆ ಬಂದಿದೆ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರ ಮಾಡಲು ಹೋದರೆ ಬಿಜೆಪಿಯವರು ಅಡ್ಡಿಪಡಿಸುತ್ತಾರೆ. ನಗರ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದರು. ಸಿದ್ದರಾಮಯ್ಯ ಅವರನ್ನು ಹಿಂಬಾಗಿಲ ಮೂಲಕ ಹೊರಟು ಹೋಗಿ ಎಂದು ಹೇಳುತ್ತಾರೆ ಎಂದರೆ ಕಾನೂನು ಸುವ್ಯವಸ್ಥೆ ಎಲ್ಲಿದೆ ? ಇದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಸಿದ್ದರಾಮಯ್ಯಪ್ರಚಾರಕ್ಕೆ ಅಡ್ಡಿಪಡಿಸಿದ ಬಿಜೆಪಿಯವರನ್ನು ಕೂಡಲೇ ಬಂಧಿಸಬೇಕು. ಇಲ್ಲದೇ ಹೋದರೆ ನಾವು ಪ್ರತಿಭಟನೆ ಮುಂದುವರೆಸುತ್ತೇವೆ. ಕ್ಷೇತ್ರದ ಜನರು ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಇಬ್ಬರು ಎಸಿಪಿಗಳನ್ನು ಅಮಾನತುಪಡಿಸುವಂತೆ ಕಾಂಗ್ರೆಸ್ ದೂರು ನೀಡಿದೆ. ಅದನ್ನು ಆಧರಿಸಿ ಕ್ರಮ ಕೈಗೊಳ್ಳದೆ ಇದ್ದರೆ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಿನ ಭಯ ಎದುರಾಗಿದೆ. ಹಾಗಾಗಿ ಬೆಳಗ್ಗೆ 7 ಗಂಟೆಗೆ ಹಣ ಹಂಚಿಕೆ ಆರಂಭಿಸಿದ್ದಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ವಿಡಿಯೋ ದಾಖಲೆಗಳಿವೆ. ಮಾಧ್ಯಮಗಳು ಅದನ್ನು ಚುನಾವಣಾ ಆಯೋಗಕ್ಕೆ ನೀಡಿ ಪ್ರಜಾಪ್ರಭುತ್ವ ಉಳಿಸಲು ಸಹಕರಿಸಬೇಕು. ಹಣ ಹಂಚಿಕೆ ಆರೋಪ ಮಾಡಿದ್ದಕ್ಕಾಗಿ ಆಯೋಗ ನನಗೆ ನೋಟಿಸ್ ನೀಡಿದೆ. ನನ್ನ ಬಳಿ ಇರುವ ಸಾಕ್ಷ್ಯಗಳ ಸಮೇತ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುವ ಮೂಲಕ ತಮ್ಮ ಗೂಂಡಾ ಸಂಸ್ಕøತಿಯನ್ನು ಪ್ರದರ್ಶಿಸುತ್ತಿದ್ದಾರೆ. ಹಿರಿಯ ನಾಯಕರು ಪ್ರಚಾರ ಮಾಡಿ ಸತ್ಯ ಹೇಳಿಬಿಟ್ಟರೆ ಜನ ಜಾಗೃತರಾಗುತ್ತಾರೆ. ನನಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿ ಗುಂಡಾ ಪ್ರವೃತ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಉಪಚುನಾವಣೆ ಫಲಿತಾಂಶ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆಡಳಿತ ವೈಖರಿಗೆ ದಿಕ್ಸೂಚಿಯಾಗಲಿದೆ. ಈ ಸರ್ಕಾರದ ಪತನದ ಕಾಲ ಸನ್ನಿಹಿತವಾಗಿದೆ.

ಇದು ನನ್ನ ಅಧ್ಯಕ್ಷ ಸ್ಥಾನದ ಸತ್ವ ಪರೀಕ್ಷೆ ಅಲ್ಲ. ರಾಜ್ಯದ ಜನರ ಸತ್ವ ಪರೀಕ್ಷೆ. ನಾನು ಈ ಮೋದಲೂ ಕಾರ್ಯಕರ್ತನಾಗಿದ್ದೇನೆ. ಈಗಲೂ ಕಾರ್ಯಕರ್ತನಾಗಿದ್ದೇನೆ. ಅಧ್ಯಕ್ಷ ಸ್ಥಾನ ದೊಡ್ಡ ಅಧಿಕಾರ ಎಂದು ನಾನು ಭಾವಿಸಿಲ್ಲ ಎಂದರು. ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಕಾರಣ ಎಂದು ಹೇಳಿರುವ ಡಿಸಿಎಂ ಅಶ್ವತ್ಥನಾರಾಯಣ ಅವರದ್ದು ಮೆಂಟಲ್ ಕೇಸು. ಹುಚ್ಚಾಸ್ಪತ್ರೆಯಲ್ಲಿ ಅವರಿಗೆ ಒಳ್ಳೆಯ ಬೆಡ್ ವ್ಯವಸ್ಥೆ ಮಾಡಿಸಿ ಎಂದು ಲೇವಡಿ ಮಾಡಿದ್ದಲ್ಲದೆ, ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಶಾಸಕರನ್ನು ಸೆಳೆಯಲು ಏನೆಲ್ಲಾ ಮಾಡಿದ್ದಾರೆ ಎಂಬುದು ಗೊತ್ತಿದೆ.

ಜೆಡಿಎಸ್‍ನ ಶಾಸಕ ಶ್ರೀನಿವಾಸ್‍ಗೌಡ ಅವರು ಬಿಜೆಪಿಯವರು ತಮಗೆ ಹಣ ಕೊಟ್ಟಿದ್ದನ್ನು ಅಧಿವೇಶನದಲ್ಲೇ ಹೇಳಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ನನ್ನ ವಿರುದ್ಧ ನಡೆದಿರುವ ಸಿಬಿಐ, ಜಾರಿ ನಿರ್ದೇಶನಾಲಯದ ದಾಳಿಗಳು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

Facebook Comments