ಶಿವರಾತ್ರಿ ಪ್ರಯುಕ್ತ 130 ಕೆರೆಗಳ ಮಣ್ಣಿನ 11 ಅಡಿ ಎತ್ತರದ ಬೃಹತ್ ಶಿವಲಿಂಗ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

ಯಲಹಂಕ, ಫೆ.20- ಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದ್ದು, ಇಡೀ ರಾತ್ರಿ ಶಿವನನ್ನು ಆರಾಧನೆ ಮಾಡುವ ಮೂಲಕ ಕ್ರಿಯಾ-ಕರ್ತೃವನ್ನು ಒಲಿಸಿಕೊಳ್ಳುವ ಅನಾದಿ ಕಾಲದ ಪದ್ಧತಿಯಾದ ಮಹಾ ಶಿವರಾತ್ರಿಯನ್ನು ಯಲಹಂಕದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತಿದೆ.

ತಾಲ್ಲೂಕು ಆಡಳಿತ, ಬಿಬಿಎಂಪಿ ಮಹಾಶಿವನ ಆರಾಧನೆಗೆ ತಾಲ್ಲೂಕಿನ ವಿವಿಧ 130 ಕೆರೆಗಳ ಶುದ್ಧ ಮಣ್ಣಿನಿಂದ 11 ಅಡಿ ಎತ್ತರದ ಶಿವಲಿಂಗ ಸ್ಥಾಪನೆ ಮಾಡಿದ್ದು, ಜಲ ಸಂರಕ್ಷಣೆ ಹೆಸರಲ್ಲಿ ಮಾಡುತ್ತಿರುವ ವಿಶಿಷ್ಟ, ವಿನೂತನ ಪ್ರಯತ್ನಕ್ಕೆ ತಾಲ್ಲೂಕಿನ ಎಲ್ಲಾ ಗ್ರಾಮಗಳಿಂದ ತರುವ ನೀರಿನಿಂದ ಅಭಿಷೇಕಕ್ಕೆ ಅನುವು ಮಾಡಿಕೊಡಲಾಗಿದೆ.

ತಾಲ್ಲೂಕಿನ ಗ್ರಾಮಸ್ಥರು, ಸಾರ್ವಜನಿಕರು ಒಂದೆಡೆ ಸೇರಿ ಮಹಾಶಿವನನ್ನು ಆರಾಧಿಸಲು ಅವಕಾಶ ಮಾಡಿಕೊಟ್ಟಿರುವುದು ನಶಿಸಿ ಹೋಗುತ್ತಿರುವ ಕೆರೆಗಳು, ಕುಗ್ಗುತ್ತಿರುವ ಅಂತರ್ಜಲ ಸಂರಕ್ಷಣೆ ಹಾಗೂ ಜನರಲ್ಲಿ ನೀರಿನ ಮಹತ್ವ ಸಾರುವ ನಿಟ್ಟಿನಲ್ಲಿ ಈ ರೀತಿಯ ವಿಭಿನ್ನ ಕಾರ್ಯಕ್ರಮ ನೆರವೇರುತ್ತಿದೆ.

ಯಲಹಂಕದ ತಾಲ್ಲೂಕು ಕಚೇರಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾಶಿಯಿಂದ ಸ್ಫಟಿಕ ಲಿಂಗ ಸಹ ತರಿಸಲಾಗಿದೆ. ಶಿವನಿಗೆ ಪ್ರಿಯವಾದ ಕೀರ್ತನೆ, ಭಜನೆ ಸೇರಿ ವಿವಿಧ ಶಾಲಾ-ಕಾಲೇಜುಗಳ ಮಕ್ಕಳಿಂದ ಶಿವ ತಾಂಡವ ನೃತ್ಯ ಸಂಪನ್ನಗೊಳ್ಳಲಿದೆ.

ಇಡೀ ರಾತ್ರಿ ಭಕ್ತಾದಿಗಳಿಗೆ ಶಿವನ ವಿಶ್ವರೂಪ ಬಿಂಬಿಸುವ ಗಾಯನ-ನೃತ್ಯ ಸ್ಪರ್ಧೆಗಳನ್ನೂ ಆಯೋಜಿಸುವ ಮೂಲಕ ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು, ವಿನೂತನ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಸೇರುವ ನಿರೀಕ್ಷೆಯಿದೆ.

ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಆಸನ, ಅಭಿಷೇಕಕ್ಕೆ ವ್ಯವಸ್ಥೆ, ಇಡೀ ರಾತ್ರಿ ಪೂಜಾ-ಕೈಂಕರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ನಡೆದಿದೆ ಎಂದು ತಹಸೀಲ್ದಾರ್ ರಘುಮೂರ್ತಿ ತಿಳಿಸಿದ್ದಾರೆ. ಶಿವರಾತ್ರಿದಿನ ಸಂಜೆ ಆರಂಭವಾಗುವ ಪೂಜಾ-ಕೈಂಕರ್ಯಗಳು 22ರಂದು ಬೆಳಿಗ್ಗೆ 6 ಗಂಟೆವರೆಗೂ ನಡೆಯಲಿದ್ದು, ಮಹಾ ಮಂಗಳಾರತಿಯೊಂದಿಗೆ ಅಂತ್ಯವಾಗಲಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

Facebook Comments

Sri Raghav

Admin