“ಗ್ರಾಮೀಣ ಕುಡುಕರು ಶೇ.17ರಷ್ಟು ತೆರಿಗೆ ಪಾವತಿಸಿದರೂ ಸರಿಯಾಗಿ ರೇಷನ್ ಸಿಗುತ್ತಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.20- ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರಮುಖ ಆದಾಯ ತರುವ ಅಬಕಾರಿ ತೆರಿಗೆಗೆ ಗ್ರಾಮೀಣ ಭಾಗದ ಜನರು ಶೇ.17ರಷ್ಟು ಕರ ಪಾವತಿಸುತ್ತಿದ್ದು, ಪಡಿತರರೂಪದಲ್ಲಿ ಆ ಜನರಿಗೆ 2 ಸಾವಿರ ಕೋಟಿ ರೂ. ಮಾತ್ರ ನೀಡಲಾಗುತ್ತಿದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

2020-21ನೇ ಸಾಲಿನ ಅಯವ್ಯಯ ಅಂದಾಜು ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿದ ಅವರು, ಮದ್ಯಸೇವಿಸುವವರು ಪಾವತಿಸುವ ತೆರಿಗೆ ಹಣದಲ್ಲಿ ರಾಜ್ಯ ಆಳುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಒಂದು ಕ್ವಾಟರ್ ಮದ್ಯ ಸೇವಿಸಿದರೆ 45 ರೂ. ಸರ್ಕಾರಕ್ಕೆ ಆದಾಯ ಬರುತ್ತದೆ. ಮದ್ಯ ಸೇವಿಸಿ ಹೆಚ್ಚು ತೆರಿಗೆ ಪಾವತಿಸಿದರೂ ಅವರಿಗೆ ಪಡಿತರರೂಪದಲ್ಲಿ ನೀಡುತ್ತಿರುವುದು ಕಡಿಮೆಯಾಗಿದೆ. ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ಉಳಿದಿರುವುದು ಅಬಕಾರಿ, ಡೀಸೆಲ್ ಮತ್ತು ಪೆಟ್ರೋಲ್ ಮಾತ್ರ ಎಂದರು.

ರಾಜ್ಯ ಮತ್ತು ಕೇಂದ್ರದಲ್ಲಿ ಏಕಪಕ್ಷ ಅಧಿಕಾರವಿದ್ದರೆ ಚೆನ್ನಾಗಿರುತ್ತದ ಎಂದು ಹೇಳಲಾಗಿತ್ತು. ಆದರೆ ಏಕೆ ಹಣದ ಕೊರತೆ ಉಂಟಾಗಿದೆ. ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.ರಾಜ್ಯದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಜಿಎಸ್‍ಟಿ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡಬೇಕು. ಹಾಗೆಯೇ 15ನೇ ಹಣಕಾಸು ಆಯೋಗದಿಂದ ಆಗಿರುವ ವ್ಯತ್ಯಾಸವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಏಕಮುಖ ತೆರಿಗೆ ಜಾರಿಗೆ ತಂದು ಯಶಸ್ವಿಯಾಗಿದ್ದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಏಕೆ ಮೂರು ಸಾವಿರ ಕೋಟಿ ರೂ. ಜಿಎಸ್‍ಟಿ ಪರಿಹಾರ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.ರಾಜ್ಯದ ಬದ್ಧತಾ ವೆಚ್ಚವೇ ಎರಡು ಲಕ್ಷದ ಐದು ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಈ ವೆಚ್ಚ ಭರಿಸಲು ಬಂಡವಾಳ ವೆಚ್ಚದಲ್ಲಿ(ಸಾಲ) 25 ಸಾವಿರ ಕೋಟಿ ರೂ. ಭರಿಸಬೇಕಾಗುತ್ತದೆ. ಇನ್ನು ಬಜೆಟ್‍ನಲ್ಲಿ 20ರಿಂದ 22 ಸಾವಿರ ಕೋಟಿ ರೂ. ಉಳಿಯುತ್ತದೆ. ಇದರಿಂದ ಏನು ಸಾಧನೆ ಮಾಡಲು ಸಾಧ್ಯ. ಯಾವ ಇಲಾಖೆಗೆ ಅನುದಾನ ಕೊಡಲು ಆಗುತ್ತದೆ ಎಂದರು.

ಅನುದಾನ ಕೊರತೆಯಿಂದ ಕ್ರಿಯಾಯೋಜನೆಗಳು ವಿಫಲವಾಗುವುದಿಲ್ಲವೇ ಎಂದ ಅವರು, ತೆರಿಗೆ ಪಾವತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಕೇಂದ್ರ ಸರ್ಕಾರ ರಾಜ್ಯದ ಪಾಲನ್ನು ಕೊಡಬೇಕು ಎಂದು ಹೇಳಿದರು. ಹಿಂದಿ ಭಾಷಾ ರಾಜ್ಯಗಳಿಗೆ ವಿಶೇಷ ಅನುದಾನ ಕೊಡಿ. ಬೇಡ ಎನ್ನುವುದಿಲ್ಲ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ತಾರತಮ್ಯ ಮಾಡುವುದು ಸರಿಯೇ. ರಾಜ್ಯಗಳಿಗೆ ಸಮಾನ ಅನುದಾನ ಹಂಚಿಕೆ ಆಗಬೇಡವೇ ಎಂದರು.

ಆದಾಯ ತೆರಿಗೆ ಸೋರಿಕೆಯನ್ನು ಕೇಂದ್ರ ಸರ್ಕಾರ ತಡೆಯಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ನಮ್ಮಲ್ಲಿರುವ ಕಬ್ಬಿಣದ ಅದಿರನ್ನು ಚೈನಾಕ್ಕೆ ಕಳುಹಿಸಿ ಅಲ್ಲಿಂದ ಸಿದ್ದ ವಸ್ತುಗಳನ್ನು ಪಡೆದು ತೆರಿಗೆ ಪಾವತಿಸುವಂತಹ ಪರಿಸ್ಥಿತಿ ಸರಿಯಲ್ಲ. ನಮ್ಮಲ್ಲೇ ಕಚ್ಚಾ ಸಾಮಾಗ್ರಿಗಳ ಸದ್ಬಳಕೆಯಾಗಬೇಕು ಎಂದರು.

ಸರ್ಕಾರಿ ನೌಕರರ ಪಿಂಚಣಿ, ತುಟಿಭತ್ಯೆ ಹೆಚ್ಚಳದಿಂದಾಗಿ 10 ಸಾವಿರ ಕೋಟಿ ರೂ. ಹೊರೆಯಾಗುತ್ತದೆ. ಯಾವ ಮೂಲದಿಂದ ಭರಿಸಬೇಕು ಎಂಬುದನ್ನು ಹೇಳಬೇಕು. ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ 1800 ಕೋಟಿ ರೂ. ಕೊಟ್ಟಿದೆ. ಈ ವಿಚಾರದಲ್ಲಾದರೂ ದಾರಾಳತನ ತೊರಬೇಕಿತ್ತು. ಕನಿಷ್ಟ 10 ಸಾವಿರ ಕೋಟಿ ರೂ. ರಾಜ್ಯಕ್ಕೆ ನೀಡಬೇಕಾಗಿತ್ತು.

ಮುಖ್ಯಮಂತ್ರಿಯವರು ಬಜೆಟ್‍ನ್ನು ಆರು ವಲಯಗಳಾಗಿ ವಿಂಗಡಿಸಿರುವುದರ ತಿರಳು ಅರ್ಥವೂ ಆಗುತ್ತಿಲ್ಲ. ಯಾವ ಉದ್ದೇಶಕ್ಕೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನಮ್ಮಲ್ಲಿ ಬೆಳೆ ನೀತಿ ಇಲ್ಲದೆ ರೈತರು ಸಂಕಷ್ಟ ಎದುರಿಸುವಂತಾಗುತ್ತಿದೆ ಎಂದರು.

Facebook Comments