6 ತಿಂಗಳೊಳಗೆ ಶಿವಮೊಗ್ಗದ ವಿಮಾನ ನಿಲ್ದಾಣ ಪೂರ್ಣಗೊಳ್ಳಲು ಸಿಎಂ ಖಡಕ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.14- ಇನ್ನು ಆರು ತಿಂಗಳೊಳಗೆ ಶಿವಮೊಗ್ಗದ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲು ತ್ವರಿತವಾಗಿ ಕಾಮಗಾರಿಯನ್ನು ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ರುದ್ರೇಗೌಡ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಪಿ.ರವಿಕುಮಾರ್, ಸಿಎಂ ಸಲಹೆಗಾರ ಎಂ.ಲಕ್ಷ್ಮಿನಾರಾಯಣ, ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.

ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು ಮುಂದೆ ಇದೇ ರೀತಿ ಉದಾಸೀನ ತೋರಿದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹಿಂದೆಮುಂದೆ ನೋಡುವುದಿಲ್ಲ ಎಂದು ಗುಡುಗಿದರು.

ಈಗಾಗಲೇ ಕಾಮಗಾರಿಗೆ 40 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇನ್ನೊಂದು ವಾರದೊಳಗೆ ಎಲ್ಲ ರೀತಿಯ ಪೇಪರ್ ವರ್ಕ್ ಮುಗಿಸಿ ಕೆಲಸ ಆರಂಭಿಸಬೇಕು. 6 ತಿಂಗಳೊಳಗೆ ವಿಮಾನ ನಿಲ್ದಾಣ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕೆಂದು ತಾಕೀತು ಮಾಡಿದರು.

ನಿಲ್ದಾಣಕ್ಕೆ ಎಷ್ಟೇ ಹಣ ಬೇಕಾದರೂ ಸರ್ಕಾರ ಬಿಡುಗಡೆ ಮಾಡಲು ಸಿದ್ದವಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದು ನನಗೆ ತೃಪ್ತಿ ತಂದಿಲ್ಲ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.

ವಿಮಾನ ನಿಲ್ದಾಣದ ರನ್ ವೇ ಅನ್ನು 1.2 ಕಿ.ಮೀನಿಂದ 2.1 ಕಿ.ಮೀಗೆ ಹೆಚ್ಚಿಸಲು ಇದೇ ವೇಳೆ ಅನುಮತಿ ನೀಡಲಾಗಿದೆ. ಅಲ್ಲದೆ ಕಾಮಗಾರಿ ವೇಗ ಹೆಚ್ಚಿಸಲು 4ಜಿ ಅನುಮತಿ ನೀಡಲಾಗಿದೆ.  ಶಿವಮೊಗ್ಗ ರೈಲ್ವೆ ಟರ್ಮಿನಲ್‍ಗೆ ಸಂಬಂಧಿಸಿದಂತೆ ಕೋಟೆ ಗಂಗೂರ್‍ನಲ್ಲಿ ಭೂ ಸ್ವಾಧೀನಪಡಿಸಿಕೊಂಡು ಕಾಮಗಾರಿ ಕೈಗೊಳ್ಳಬೇಕು. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಸೂಚನೆ ಕೊಟ್ಟರು.

ಸಾಗರ ಜಿಲ್ಲೆ ಸಿಂಗದೂರು ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸೇತುವೆಗೆ ಈಗಾಗಲೇ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ. ಕಾಮಗಾರಿಯನ್ನು ಆರಂಭಿಸಲು ಎಲ್ಲ ರೀತಿಯ ಅಡೆತಡೆಗಳನ್ನು ಪರಿಹರಿಸಬೇಕೆಂದು ಸಲಹೆ ಮಾಡಿದರು.  ಇಂದು ಚರ್ಚಿಸಿದ ಎಲ್ಲ ವಿಷಯಗಳು ತ್ವರಿತವಾಗಿ ಜಾರಿಗೆ ಮಾಡಬೇಕು. ನಾನು ಯಾವುದೇ ಕಾರಣಕ್ಕೂ ಬೇಜವಾಬ್ದರಿಯನ್ನು ಸಹಿಸುವುದಿಲ್ಲ ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

Facebook Comments