ಶಿವಮೊಗ್ಗದ ದುರ್ಘಟನೆಗೆ ಪ್ರಧಾನಿ ಮೋದಿ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ: ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್​ನಲ್ಲಿ ಗುರುವಾರ ರಾತ್ರಿ 10.20ರ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದ್ದು, ಹಲವರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಎಷ್ಟು ಎಂಬುದು ನಿಖರವಾಗುತ್ತಿಲ್ಲ. ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಎಷ್ಟು ಜನ ಇದ್ದರು ಎಂಬುದು ಗೊತ್ತಾಗಿಲ್ಲ. ಮೃತ ದೇಹಗಳು ಅಲ್ಲಲ್ಲಿ ಛಿದ್ರಗೊಂಡು ಬಿದ್ದಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿತ್ತು.

ಸ್ಪೋಟದಿಂದಲೇ ದುರಂತ ಸಂಭವಿಸಿರುವುದು ದೃಢಪಟ್ಟಿದೆ. ಆದರೆ ಸ್ಪೋಟಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಲಾರಿಯಲ್ಲಿ ಸ್ಪೋಟಕಗಳನ್ನು ತರಲಾಗಿದ್ದು, ಈ ಲಾರಿಯೇ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಹೊರವಲಯದ ಹುಣಸೋಡು ಬಳಿ ರೈಲ್ವೆ ಕ್ರಷರ್​ಗೆ ಜಿಲೆಟಿನ್ ಕಡ್ಡಿ ತಂದಿದ್ದ ಲಾರಿ ಸ್ಪೋಟಗೊಂಡಿದೆ. ಅಲ್ಲಿನ ನಮ್ಮ ಕಾರ್ಯತರ್ಕರು ಭಾರಿ ಸ್ಪೋಟ ಕೇಳಿ ಬಂದ ಹಾಗೂ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿ ಭೀಕರವಾಗಿತ್ತು. ಆರು ಛಿದ್ರಗೊಂಡ ದೇಹಗಳು ಪತ್ತೆಯಾಗಿದ್ದು ಲಾರಿಗೆ ಸಂಪೂರ್ಣ ಹಾನಿಯಾಗಿದೆ.

ಸುತ್ತಮುತ್ತಲ ಪ್ರದೇಶದಲ್ಲಿ ಕೆಟ್ಟ ವಾಸನೆ ಹರಡಿದ್ದು ದುರಂತ ನಡೆದ ಸ್ಥಳವನ್ನು ಪ್ರವೇಶಿಸಲಾಗದ ಪರಿಸ್ಥಿತಿ ನಿರ್ವಣವಾಗಿದೆ. ಲಘು ಭೂಕಂಪದ ನಂತರ ಲಾರಿಯಲ್ಲಿನ ಜಿಲೆಟಿನ್ ಕಡ್ಡಿಗಳು ಸ್ಪರ್ಶಗೊಂಡು ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ. ಕಿಲೋಮೀಟರ್​ವರೆಗೆ ಮನೆಗಳ ಗಾಜು, ಕಿಟ ಒಡೆದು ಹೋಗಿದ್ದು ಮನೆಗಳ ಗೋಡೆ ಬಿರುಕು ಬಿಟ್ಟಿವೆ.

# ಪ್ರಧಾನಿ ಮೋದಿ ಸಂತಾಪ :
ಶಿವಮೊಗ್ಗ ಕಲ್ಲು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿರುವ ಕಾರ್ಮಿಕರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಶಿವಮೊಗ್ಗದಲ್ಲಿ ನಡೆದ ಪ್ರಾಣಹಾನಿ ನೋವು ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಶೀಘ್ರವೇ ಗಾಯಗೊಂಡವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ಸಹಾಯ ನೀಡುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.

 

Facebook Comments

Sri Raghav

Admin