ಕೊಹ್ಲಿ ಟಗರು, ಧೋನಿ ಮಾಸ್ ಎಂದ ಶಿವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ. 18- ಐಪಿಎಲ್ 13ರ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಅಭಿಮಾನಿಗಳಲ್ಲದೆ, ಸಿನಿ ತಾರೆಯರು ಕೂಡ ಈ ರಂಗು ರಂಗಿನ ಹಬ್ಬದಲ್ಲಿ ಮಿಂದೇಳೆಲು ಕಾತರಿಸುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‍ವುಡ್‍ನಲ್ಲಿ ಟಗರು, ಮಾಸ್ ಕಲಾವಿದ ಎಂದೇ ಗುರುತಿಸಿಕೊಂಡಿರುವ ಸೆಂಚುರಿ ಸ್ಟಾರ್ ಶಿವಣ್ಣ ಐಪಿಎಲ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್, ಕ್ರಿಸ್‍ಗೇಲ್‍ರನ್ನು ತಮ್ಮದೇ ಧಾಟಿಯಲ್ಲಿ ವರ್ಣಿಸಿದ್ದಾರೆ.

ಸ್ಟಾರ್ ಸ್ಪೋಟ್ರ್ಸ್ ಕನ್ನಡಕ್ಕಾಗಿ ಮಾಜಿ ಕ್ರಿಕೆಟಿಗ ವಿಜಯಭಾರದ್ವಾಜ್ ನಡೆಸಿದ ಸಂದರ್ಶನದಲ್ಲಿ ಶಿವಣ್ಣ ಕ್ರಿಕೆಟ್‍ನೊಂದಿಗೆ ತಮ್ಮ ಅವಿನಾಭಾವ ಸಂಬಂಧ ಹಾಗೂ ಐಪಿಎಲ್ ಹಬ್ಬದ ರಂಗನ್ನು ವಿವರಿಸಿದ್ದಾರೆ.

ಐಪಿಎಲ್ ಆರಂಭಗೊಂಡಾಗಿನಿಂದಲೂ ಆರ್‍ಸಿಬಿ ತಂಡವನ್ನೇ ಬೆಂಬಲಿಸುತ್ತಾ ಬಂದಿರುವ ಶಿವಣ್ಣ, ಈ ಬಾರಿಯಾದರೂ ಕಪ್ ಗೆಲ್ಲಲಿ ಎಂದು ಶುಭ ಹಾರೈಸಿದ್ದಲ್ಲದೆ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಟಗರಿಗೆ ಹೋಲಿಸಿದ್ದಾರೆ.

ಐಪಿಎಲ್ ಎಂಬುದು ಟ್ರಿಕ್ಕಿ ಗೇಮ್ ಆಗಿದ್ದು ಕ್ರಿಸ್‍ಗೇಲ್ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸುತ್ತಾ ಅದಕ್ಕೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಆಟಿಟ್ಯೂಡ್ ಒಂದು ರೀತಿ ಟಗರಿನಂತಿದ್ದು ಕ್ರೀಸ್‍ನಲ್ಲಿ ನೆಲಕಚ್ಚಿ ನಿಂತರೆ ಎದುರಾಳಿ ಬೌಲರ್‍ಗಳ ಮೇಲೆ ಟಗರಿನಂತೆ ಎಗರಿ ಬಿದ್ದು ರನ್‍ಗಳ ಸುರಿಮಳೆಯನ್ನೇ ಸುರಿಸುತ್ತಾರೆ ಎಂದು ಕೊಹ್ಲಿಯ ಬ್ಯಾಟಿಂಗ್ ವೈಭವವನ್ನು ವರ್ಣಿಸಿದ್ದಾರೆ.

ವಿಶ್ವಚಾಂಪಿಯನ್ಸ್ ನಾಯಕ ಎಂದು ಬಿಂಬಿತಗೊಂಡಿರುವ ಮಹೇಂದ್ರಸಿಂಗ್‍ಧೋನಿಯ ಬಗ್ಗೆಯೂ ಶಿವಣ್ಣ ಬಣ್ಣನೆ ಮಾಡಿದ್ದು ಧೋನಿ ಮಾಸ್ ಹಾಗೂ ಕ್ಲಾಸ್ ಎರಡು ಅಂಶವನ್ನು ಹೊಂದಿದ್ದಾರೆ, ಅವರ ಲುಕ್ ಮಾಸ್ ಆಗಿದ್ದರೆ, ಆತನಲ್ಲಿರುವ ಶಾಂತಿ, ಕ್ರಾಂತಿ ಗುಣಗಳು ಕ್ಲಾಸ್ ಅಂಶಗಳನ್ನು ಹೋಲುತ್ತವೆ.

ನನಗೆ ಪಾಕಿಸ್ತಾನದ ವಾಸಿಮ್ ಅಕ್ರಮ್‍ರ ಬೌಲಿಂಗ್ ಶೈಲಿ ತುಂಬಾ ಇಷ್ಟ , ಅವರು ಜಿಂಕೆ ರೀತಿ ಓಡಿ ಬಂದು ಚೆಂಡನ್ನು ಎಸೆಯುತ್ತಾರೆ, ಅವರ ಓಟದ ಶೈಲಿ ತುಂಬಾ ವಿಭಿನ್ನವಾಗಿದೆ ಎಂದು ಪ್ರಶಂಸಿಸಿದರು.

ಜೀವನದಲ್ಲಿ ನಮ್ಮ ಬದುಕು ಇಷ್ಟೇ ಎಂದು ಕೊರಗುವುದು, ಬೇರೊಬ್ಬರ ಏಳಿಗೆ ಕಂಡು ಹೊಟ್ಟೆ ಕಿಚ್ಚು ಪಡುವುದನ್ನು ಬಿಟ್ಟು ಹೋರಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೇಳಿದರು.

Facebook Comments