ಡಿಸಿಎಂ ಭೇಟಿಯಾದ ಶಿವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ಚಿತ್ರರಂಗದ ಸಮಗ್ರ ಪುನಶ್ಚೇತನ ಆಗಬೇಕಿದ್ದು, ಈ ಕ್ಷೇತ್ರದ ಎಲ್ಲ ವಿಭಾಗಗಳನ್ನೂ ಗಮನಿಸುವ ಅಗತ್ಯವಿದೆ. ಜತೆಗೆ ಹೊಸ ಕಾಯ್ದೆಯನ್ನು ರೂಪಿಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ ನಾರಾಯಣ್ ಇಂದಿಲ್ಲಿ ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಚಿತ್ರರಂಗದ ವಿಚಾರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಇಂದು ಡಿಸಿಎಂ ಅಶ್ವತ್ಥ ನಾರಾಯಣ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಅವರು ಮಾತನಾಡಿದರು.

ಮುಖ್ಯಮಂತ್ರಿಗಳಿಗೂ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಇದೆ. ಈಗಿನ ಪರಿಸ್ಥಿತಿಯಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ತರುವುದು ಮುಖ್ಯ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ವಾರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.ಸಿನಿಮಾ ರಂಗದಲ್ಲಿರುವ ನೌಕರರು ಯಾವುದೇ ಇಲಾಖೆ ಯಡಿ ಬರುವುದಿಲ್ಲ. ಈಗಾಗಲೇ ಇವರನ್ನು ಕಾರ್ಮಿಕ ವರ್ಗಕ್ಕೆ ಸೇರಿಸಬೇಕೆಂದು ಹೇಳಲಾಗಿದೆ.

ಹೆಚ್ಚು ಸಬ್ಸಿಡಿ ನೀಡುವುದು, ಸಿನಿಮಾ ಥಿಯೇಟರ್‍ಗಳಿಗೆ ರಿಯಾಯಿತಿ ನೀಡುವುದು, ಜಿಎಸ್‍ಟಿ ಮತ್ತಿತರ ವಿಚಾರಗಳನ್ನು ಚರ್ಚೆ ಮಾಡಬೇಕಿದೆ. ಚಿತ್ರಮಂದಿರಗಳನ್ನು ಕಮರ್ಷಿಯಲ್ ಕ್ಯಾಟಗರಿಯಿಂದ ಹೊರತರಬೇಕಿದೆ. ಈಗಾಗಲೇ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ನೀಡುವ ಬಗ್ಗೆ ಬೇಡಿಕೆ ಬಂದಿದೆ.  ಎಲ್ಲವನ್ನೂ ಪರಿಶೀಲಿಸಬೇಕಿದೆ ಎಂದು ಮಾಹಿತಿ ನೀಡಿದರು.

ನಟ ಶಿವರಾಜ್‍ಕುಮಾರ್ ಮಾತನಾಡಿ, ಇದು ಎಲ್ಲರಿಗೂ ಸಂಕಷ್ಟದ ಕಾಲ. ಹಾಗಾಗಿ ಚಿತ್ರರಂಗದ ಎಲ್ಲ ಆಯಾಮಗಳನ್ನೂ ಉಪಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸಿದ್ದೇನೆ. ಚಿತ್ರರಂಗದ ಉದ್ಧಾರಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ನಮ್ಮ ಬೇಡಿಕೆಗಳಿಗೆ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.

ನಾವು ಯಾವುದೇ ರೀತಿಯ ಪ್ರತ್ಯೇಕ ಪ್ಯಾಕೇಜ್ ಕೇಳಿಲ್ಲ. ಈ ಕ್ಷೇತ್ರದ ಒಟ್ಟಾರೆ ಹಾನಿಗಳನ್ನು ಸರಿಪಡಿಸುವ ಚಿಂತನೆ ಹಿನ್ನೆಲೆಯಲ್ಲಿ ಅನುಕೂಲ ಕಲ್ಪಿಸುವಂತೆ ಕೋರಿದ್ದೇವೆ ಎಂದು ವಿವರಿಸಿದರು.

Facebook Comments

Sri Raghav

Admin