ಚಂದನವನದಲ್ಲಿ ನಾಯಕತ್ವದ ಕೊರತೆ ತುಂಬಿದ ಶಿವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

– ಎನ್.ಎಸ್.ರಾಮಚಂದ್ರ
ನಿಂತ ನೀರಿನಂತಾಗಿದ್ದ ಕನ್ನಡ ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವ ಸೂಚನೆ ಸಿಕ್ಕಿದೆ. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಾರ್ಮಿಕ ಕಲಾವಿದರ ಒಕ್ಕೂಟ ಹೀಗೆ ಹಲವು ಸಂಘಟನೆಗಳು ಚಿತ್ರರಂಗದಲ್ಲಿವೆ.

ಇವಕ್ಕೆಲ್ಲ ಸೂಕ್ತವಾಗಿ ಆಯ್ಕೆಯಾದ ಪದಾಧಿಕಾರಿಗಳಿದ್ದಾರೆ. ಆದರೆ, ಕಲಾವಿದರ ಸಂಘದ ಅಧ್ಯಕ್ಷ ಸ್ಥಾನ ಮಾತ್ರ ಖಾಲಿಯಾಗಿಯೇ ಇದೆ.ಚಿತ್ರರಂಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕಲಾವಿದರ ಸಂಘವು ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಡಾ.ರಾಜ್‍ಕುಮಾರ್, ಅಂಬರೀಷ್ ಅವರು ಕಲಾವಿದರ ಸಂಘದ ಅಧ್ಯಕ್ಷರಾಗಿ ಉಪಯುಕ್ತವಾದ ಕೆಲಸಗಳನ್ನು ಮಾಡಿದ್ದಾರೆ. ಆ ಸಂಘಕ್ಕೆ ಈಗ ಅಧ್ಯಕ್ಷರಿಲ್ಲದ ಕಾರಣ ಕನ್ನಡ ಚಿತ್ರರಂಗ ಅಷ್ಟರ ಮಟ್ಟಿಗೆ ದುರ್ಬಲವಾಗಿದೆ.

ಸಮಸ್ಯೆಗಳನ್ನು ಹೊತ್ತು ಸರ್ಕಾರದ ಬಳಿ ಸಾಗುವ ಚಿತ್ರರಂಗದ ನಿಯೋಗದಲ್ಲಿ ಕಲಾವಿದರಿರಬೇಕು. ಕಲಾವಿದರಿಲ್ಲದ ನಿಯೋಗದ ದನಿಗೆ ಸತ್ವ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅದು ಸಾಬೀತಾಗಿದೆ.

ಇದನ್ನು ಮನಗಂಡ ಚಿತ್ರರಂಗವು ನಾಯಕತ್ವದ ಸ್ಥಾನ ತುಂಬಲು ಮುಂದಾಗಿದೆ. ಹಿರಿಯ ನಟ ಶಿವರಾಜ್‍ಕುಮಾರ್ ಅವರು ಈ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ. ಈ ಕುರಿತು ಶಿವಣ್ಣ ಅವರು ಆಡಿರುವ ಮಾತು ಹೀಗಿದೆ.

ಚಿತ್ರರಂಗಕ್ಕೆ ನಾಯಕತ್ವ ಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ, ನೀವೇ ನಾಯಕರಾಗಿ ಎಂದು ಬಹಳ ದಿನಗಳಿಂದ ನನ್ನ ಮೇಲೆ ಒತ್ತಡ ಇದೆ. ಆದರೆ, ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವ ಒಳ್ಳೆಯದು. ಚಿತ್ರರಂಗದ ಹಿತರಕ್ಷಣೆಗೆ ನಾನು ಸದಾ ಬದ್ಧ. ನಮ್ಮ ಇಡೀ ಕುಟುಂಬವು ಮೊದಲಿನಿಂದ ಚಿತ್ರರಂಗದ ಜತೆ ಇದೆ.

ಕನ್ನಡ ಚಿತ್ರರಂಗದ ಹಲವು ಮುಖಂಡರು ನಮ್ಮ ಬಳಿಗೆ ಬಂದು ನೀವು ನಾಯಕತ್ವ ವಹಿಸಿಕೊಳ್ಳಿ ಎಂದು ಕೇಳಿದರು. ನಾಯಕ ಎಂದು ಕರೆಸಿಕೊಳ್ಳಲು ಈಗಲೂ ನನಗೆ ಮನಸ್ಸಿಲ್ಲ. ನಾಯಕತ್ವಕ್ಕೆ ಅರ್ಹರಾದ ಬೇರೆ ಕೆಲವು ಕಲಾವಿದರು ನಮ್ಮಲ್ಲಿದ್ದಾರೆ.

ತನ್ನ ಹಿಂದೆ ಸಾವಿರ ಜನರನ್ನು ಇಟ್ಟುಕೊಂಡ ಮಾತ್ರಕ್ಕೆ ಆತ ನಾಯಕನಾಗುವುದಿಲ್ಲ. ಉದ್ಯಮದ ಪ್ರತಿಯೊಬ್ಬರನ್ನೂ ಒಟ್ಟಾಗಿ ಕೊಂಡೊಯ್ಯುವುದು ಬಹಳ ಮುಖ್ಯ.ಚಿತ್ರರಂಗ ಈಗ ದೊಡ್ಡ ಸಮಸ್ಯೆ ಎದುರಿಸುತ್ತಿದೆ. ಅದನ್ನು ನಾವು ಪರಿಹರಿಸಿಕೊಳ್ಳಲೇಬೇಕು.

ಈ ದಿಸೆಯಲ್ಲಿ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ನಾಯಕ ಅನ್ನಿಸಿಕೊಳ್ಳುವುದಕ್ಕಿಂತ ಸಮಸ್ಯೆಗಳು ಬಗೆಹರಿಯುವುದು ಮುಖ್ಯ. ಚಿತ್ರರಂಗದ ಎಲ್ಲ ವಲಯದವರೂ ನನ್ನ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ.

ಹಾಗಾಗಿ ಅವರು ನನ್ನ ಹತ್ತಿರ ಬಂದಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ಮುಖ್ಯ.
ನಾವು ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ. ಅವರ ಮುಂದೆ ಮಂಡಿಸಬೇಕಾದ ಬೇಡಿಕೆಗಳ ಪಟ್ಟಿ ಸಿದ್ಧವಾಗಬೇಕಾಗಿದೆ. ಅದರ ಸಲುವಾಗಿ ಎಲ್ಲ ವಲಯದವರು ಸಭೆ ಸೇರಿ ಚರ್ಚಿಸಬೇಕು. ನಾನು ಚಿತ್ರರಂಗದ ಜತೆ ಇದ್ದೇನೆ ಎಂದು ಶಿವರಾಜ್‍ಕುಮಾರ್ ಹೇಳಿದರು.

ಚಿತ್ರರಂಗಕ್ಕೆ ಪರಿಹಾರದ ಪ್ಯಾಕೇಜ್ ಘೋಷಿಸಿ ಎಂದು ಕೆಲವರು ಅಭಿಯಾನ ಪ್ರಾರಂಭಿಸಿದ್ದಾರೆ. ಈ ಅಭಿಯಾನಕ್ಕೆ ಅರ್ಥವಿಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‍ಕುಮಾರ್ ಹೇಳುತ್ತಾರೆ.ಚಿತ್ರರಂಗದ ಬೇಡಿಕೆ ಏನು ಅನ್ನುವುದು ಮೊದಲು ಸ್ಪಷ್ಟವಾಗಬೇಕು. ಅದರ ರೂಪುರೇಷೆ ಸಿದ್ಧವಾಗಬೇಕು. ಸಿನಿಮಾಗಳ ಬಿಡುಗಡೆ, ಚಿತ್ರೀಕರಣ ಮುಂದುವರಿಯುವಿಕೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಇದಲ್ಲದೆ ಇನ್ನೂ ಹಲವು ತಾಪತ್ರಯಗಳಿವೆ.

ನಮ್ಮಲ್ಲಿ ಇರಬಹುದಾದ ಆಂತರಿಕ ಗೊಂದಲವನ್ನು ಬಗೆಹರಿಸಿಕೊಂಡು ಒಗ್ಗಟ್ಟಾಗಿ ಮುಂದುವರಿಯುವ ನಿರ್ಧಾರ ಮಾಡಿದ್ದೇವೆ. ಚಲನಚಿತ್ರ ಪ್ರದರ್ಶಕರ ಸಂಘದ ಕೆ.ವಿ.ಚಂದ್ರಶೇಖರ್ ಮತ್ತು ಥಾಮಸ್ ಡಿಸೋಜಾ ಅವರೂ ಮಾತನಾಡಿದ್ದಾರೆ. ಶಿವರಾಜ್‍ಕುಮಾರ್ ಅವರ ನಾಯಕತ್ವ ಸಿಕ್ಕಿರುವುದರಿಂದ ನಮಗೆ ಬಲ ಬಂದಿದೆ.

ಸ್ನೇಹಜೀವಿಯಾಗಿರುವ ಹಾಗೂ ಅನುಭವಿಯೂ ಆಗಿರುವ ಶಿವಣ್ಣ ಅವರ ಮಾತನ್ನು ಚಿತ್ರರಂಗದ ಎಲ್ಲರೂ ಕೇಳುತ್ತಾರೆ. ಸರ್ಕಾರವೂ ಮನ್ನಣೆ ಕೊಡುತ್ತದೆ ಎಂಬ ನಂಬಿಕೆ ಇದೆ ಎಂದು ಪ್ರವೀಣ್‍ಕುಮಾರ್ ಈ ಸಂಜೆಗೆ ತಿಳಿಸಿದರು.

ಚಿತ್ರರಂಗದ ಪ್ರಮುಖರಾದ ಸಾ.ರಾ.ಗೋವಿಂದು, ಕಾರ್ಮಿಕರ ಒಕ್ಕೂಟದ ಅಶೋಕ್, ಉಮೇಶ್ ಬಣಕಾರ್, ರಾಮು, ಎಸ್.ಎ.ಚಿನ್ನೇಗೌಡ, ಕಾರ್ತಿಕ್‍ಗೌಡ, ಎಸ್.ವಿ.ರಾಜೇಂದ್ರಸಿಂಗ್ ಬಾಬು, ನಾಗೇಂದ್ರ ಪ್ರಸಾದ್, ಎನ್.ಎಂ.ಸುರೇಶ್, ಎನ್.ಕುಮಾರ್, ರಾಮು, ಜೆ.ಜಿ.ಕೃಷ್ಣ, ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಹಲವರು ಶಿವರಾಜ್‍ಕುಮಾರ್ ಅವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಸದ್ಯದಲ್ಲೇ ಇನ್ನೊಂದೆರಡು ಸಭೆಗಳು ನಡೆದು ಆನಂತರ ಶಿವರಾಜ್‍ಕುಮಾರ್ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ.

ನಮ್ಮ ಇಡೀ ಕುಟುಂಬವು ಮೊದಲಿನಿಂದ ಚಿತ್ರರಂಗದ ಜತೆ ಇದೆ. ಈಗ ಚಿತ್ರರಂಗವು ತುಂಬಾ ದೊಡ್ಡ ಸಮಸ್ಯೆ ಎದುರಿಸುತ್ತಿದೆ. ಅದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ನಾಯಕ ಎಂದು ಕರೆಸಿಕೊಳ್ಳಲು ಈಗಲೂ ನನಗೆ ಇಷ್ಟವಿಲ್ಲ. ಆದರೆ, ಚಿತ್ರರಂಗದವರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆಗೆ ಮಣಿದು ನನ್ನ ಕೈಲಾದ ಪ್ರಯತ್ನ ಮಾಡಲು ಮುಂದಾಗಿದ್ದೇನೆ ಎಂದು ಶಿವರಾಜ್‍ಕುಮಾರ್ ಹೇಳಿದ್ದಾರೆ.

Facebook Comments

Sri Raghav

Admin