ಶಿವರಾಂ ಕಾರಂತರ ಬಡಾವಣೆಯಲ್ಲಿ ಮನೆಗಳ ಸರ್ವೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ಶಿವರಾಂ ಕಾರಂತರ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಮನೆಗಳ ಕುರಿತಂತೆ ಮಾಹಿತಿ ಸಂಗ್ರಹಿಸಲು ಮಾರ್ಚ್ 1ರಿಂದ ಐದು ಗ್ರಾಮಗಳಲ್ಲಿ ಹೆಲ್ಪ್ ಡೆಸ್ಕ್‍ಗಳನ್ನು ಆಯೋಜಿಸಲಾಗಿದೆ ಎಂದು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಹೇಳಿದ್ದಾರೆ. ಬಿಡಿಎ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಬಿಡಿಎ ಶಿವರಾಂ ಕಾರಂತರ ಬಡಾವಣೆ ನಿರ್ಮಾಣಕ್ಕೆ ಮೊದಲ ನೋಟಿಫಿಕೇಶನ್ ಹೊರಡಿಸಿತ್ತು.

ಅನಂತರ ಹೈಕೋರ್ಟ್ ಈ ನೋಟಿಫಿಕೇಶನನ್ನು ರದ್ದು ಪಡಿಸಿತ್ತು. ಬಿಡಿಎ ನ್ಯಾಯಾಂಗ ಹೋರಾಟ ನಡೆಸಿದ ಪರಿಣಾಮ 2018ರಲ್ಲಿ ಅಧಿಸೂಚನೆ ಪರವಾಗಿ ತೀರ್ಪು ಬಂದಿದೆ. ಈ ನಡುವೆ ಸೂಚಿತ ಪ್ರದೇಶದಲ್ಲಿ ಸಾಕಷ್ಟು ಮನೆಗಳ ನಿರ್ಮಾಣವಾಗಿವೆ. 2018ರ ಆಗಸ್ಟ್ 3ರ ನಂತರ ಕಟ್ಟಿರುವ ಎಲ್ಲಾ ಮನೆಗಳು ಅಕ್ರಮ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಎಷ್ಟು ಮನೆಗಳು ನಿರ್ಮಾಣವಾಗಿವೆ. ಯಾವಾಗ ನಿರ್ಮಿಸಲಾಗಿದೆ ಎಂಬ ಅಧ್ಯಯನ ನಡೆಸಲು ಸುಪ್ರೀಂಕೋರ್ಟ್ ಚಂದ್ರಶೇಖರ್ ಅವರ ಆಯೋಗ ರಚನೆ ಮಾಡಿದೆ.

ಆಯೋಗ 17 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಿದೆ. ಸ್ಥಳೀಯ ನಿವಾಸಿಗಳು ಆಯೋಗ ಸ್ಥಾಪಿಸಿರುವ ಪ್ರತ್ಯೇಕ ವೆಬ್‍ಸೈಟ್‍ಗೆ ತಮ್ಮ ಮನೆಯಿಂದಲೇ ದಾಖಲಾತಿಗಳನ್ನು ಸಲ್ಲಿಸಬಹುದು ಅಥವಾ ತಂತ್ರಜ್ಞಾನ ಗೊತ್ತಿಲ್ಲದಿದ್ದರೆ ಮಾರ್ಚ್ 1ರಿಂದ ಆರಂಭವಾಗುವ ಐದು ಗ್ರಾಮಗಳ ಹೆಲ್ಫ್ ಡೆಸ್ಕ್‍ಗಳಿಗೆ ಬಂದು ದಾಖಲಾತಿ ಸಲ್ಲಿಸುವುದು. ಈ ಡೆಸ್ಕ್‍ಗಳಲ್ಲಿ ನಾಗರಿಕರಿಗೆ ನೆರವಾಗಲು ಸಿಎಂಆರ್ ಕಾಲೇಜಿನ 42 ಕಾನೂನು ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಬೆಂಗಳೂರು ಉತ್ತರ ಭಾಗದಲ್ಲಿ ಶಿವರಾಂ ಕಾರಂತರ ಬಡಾವಣೆ ನಿರ್ಮಾಣಕ್ಕಾಗಿ 3546 ಎಕರೆ ಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅಂದಾಜಿನ ಪ್ರಕಾರ 7 ಸಾವಿರ ಮನೆಗಳಿರುವ ಮಾಹಿತಿ ಇದೆ ಎಲ್ಲವನ್ನು ದಾಖಲಾತಿಗಳ ಪ್ರಕಾರವೇ ಅಧ್ಯಯನ ನಡೆಸಲಾಗುವುದು. ನಾಗರಿಕರು  jcc-skl.in   ವೆಬ್‍ಸೈಟ್‍ನಲ್ಲಿ ಮಾಹಿತಿಯನ್ನುಅಪ್‍ಲೋಡ್ ಮಾಡಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Facebook Comments