ರಾಜ್ಯಸಭೆಗೆ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಶಿವರಾಮೇಗೌಡ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1- ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ನಿಲ್ಲಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರೂ ಆಗಿರುವ ಕಾಂಗ್ರೆಸ್‍ನ ಆಪ್ತ ಎಲ್.ಆರ್.ಶಿವರಾಮೇಗೌಡ ಅವರನ್ನು ಕಣಕ್ಕಿಳಿಸಲು ಒತ್ತಡ ಹೇರಲಾಗುತ್ತಿದೆ. ಬಿಜೆಪಿಯ ಸದ್ಯದ ಬಲಾಬಲದ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜ್ಯಸಭೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ.

ಉಪ ಚುನಾವಣೆಯ ನಂತರ ಎರಡು ಪಕ್ಷಗಳು ಸೇರಿ 11ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮೈತ್ರಿ ಮಾಡಿಕೊಂಡಿದ್ದೇ ಆದರೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದಾಗಿದೆ. ಹೀಗಾಗಿ ಕಾಂಗ್ರೆಸ್‍ನ ಸಿದ್ದರಾಮಯ್ಯ ಅವರ ಬಣ ರಾಜ್ಯಸಭೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದ ಬೇಡ ಎಂದು ವಾದಿಸುತ್ತಿದೆ.  ಉಪಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆದಿದ್ದೇ ಆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಅವಕಾಶಗಳಿರುತ್ತವೆ.

ಅವಕಾಶವನ್ನು ಕೈಚೆಲ್ಲುವುದು ಬೇಡ. ಅಭ್ಯರ್ಥಿಯನ್ನು ಕಣಕ್ಕಿಳಿಸೋಣ ಎಂದು ಪ್ರತಿಪಾದಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ರಾಜ್ಯಸಭೆ ಚುನಾವಣೆ ಬಗ್ಗೆ ನಿರಾಸಕ್ತಿ ತೋರುತ್ತಿದೆ. ಈ ನಡುವೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರ ಹೆಸರು ಪ್ರಸ್ತಾಪವಾಗುತ್ತಿದೆ. ಮಂಡ್ಯ ಲೋಕಸಭೆಯಲ್ಲಿ ಉಪಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದ ಶಿವರಾಮೇಗೌಡರು, ವರ್ಷದೊಳಗಾಗಿಯೇ ಬಂದ ಸಾರ್ವತ್ರಿಕ ಚುನಾವಣೆಯಲ್ಲಿ ನಿಖಿಲ್‍ಕುಮಾರಸ್ವಾಮಿ ಅವರಿಗಾಗಿ ಕ್ಷೇತ್ರ ಬಿಟ್ಟುಕೊಟ್ಟರು.

ಮುಂದಿನ ಅವಧಿಗೂ ಅವರಿಗೆ ಸ್ಪರ್ಧಿಸಲು ಅವಕಾಶಗಳಿಲ್ಲ. ಹೀಗಾಗಿ ರಾಜ್ಯಸಭೆಯಲ್ಲಿ ಅವರಿಗೆ ಅವಕಾಶ ಮಾಡಿಕೊಡುವ ಪ್ರಯತ್ನಗಳು ನಡೆಯುತ್ತಿವೆ. ಪ್ರಸ್ತುತ ಸನ್ನಿವೇಶದಲ್ಲಿ ಆರ್ಥಿಕವಾಗಿ ಸದೃಢವಾಗಿರುವವರು ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರ ಎದುರು ಕಣಕ್ಕಿಳಿಯಬೇಕಿದೆ. ಕಾಂಗ್ರೆಸ್‍ನ ಯಾವ ನಾಯಕರೂ ಹಣ ಖರ್ಚು ಮಾಡುವ ಧೈರ್ಯ ಮಾಡುತ್ತಿಲ್ಲ.

ಜೆಡಿಎಸ್ ನಾಯಕರಲ್ಲೂ ಕೂಡ ಇದೇ ರೀತಿಯ ಆತಂಕಗಳಿವೆ. ಎಲ್.ಆರ್.ಶಿವರಾಮೇಗೌಡ ಅವರನ್ನು ಜೆಡಿಎಸ್ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾರಿನಿರ್ದೇಶನಾಲಯ ಪ್ರಕರಣದಲ್ಲಿ ಸಿಲುಕಿದ್ದಾಗ ಶಿವರಾಮೇಗೌಡರು ಕಾಂಗ್ರೆಸ್‍ನವರಿಗಿಂತಲೂ ಹೆಚ್ಚಾಗಿ ಡಿಕೆಶಿ ಬೆಂಬಲವಾಗಿ ನಿಂತಿದ್ದರು. ಕಾಂಗ್ರೆಸ್‍ನ ಎಲ್ಲಾ ನಾಯಕರ ಜತೆಗೂ ಶಿವರಾಮೇಗೌಡರು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಆರ್ಥಿಕವಾಗಿಯೂ ಸಾಮಥ್ರ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ಶಿವರಾಮೇಗೌಡರನ್ನು ಮೈತ್ರಿ ಪಕ್ಷಗಳ ಅಭ್ಯರ್ಥಿ ಮಾಡಬಹುದೆ ಎಂಬ ಚರ್ಚೆಯನ್ನು ಮುಂದಿಟ್ಟಿದ್ದಾರೆ. ಮೂಲಗಳ ಪ್ರಕಾರ ಎಲ್.ಆರ್.ಶಿವರಾಮೇಗೌಡ ಅಭ್ಯರ್ಥಿಯಾಗಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಎರಡೂ ಪಕ್ಷಗಳು ಭರವಸೆ ನೀಡಿದ್ದಾದರೆ ನಾಮಪತ್ರ ಸಲ್ಲಿಸಬಹುದು ಎಂಬ ಸಂದೇಶ ರವಾನಿಸಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಹೆಚ್ಚುಸ್ಥಾನ ಗೆದ್ದರೆ ಶಿವರಾಮೇಗೌಡ ಗೆಲ್ಲಬಹುದು. ಅದು ಕೊನೆ ಕ್ಷಣದಲ್ಲಿ ಭಾರೀ ಕಸರತ್ತುಗಳನ್ನೇ ನಡೆಸಬೇಕಾಗುತ್ತದೆ. ಒಂದು ವೇಳೆ ಸೋಲು ಕಂಡರೂ ಅದನ್ನು ಶಿವರಾಮೇಗೌಡರು ಕ್ರೀಡಾಮನೋಭಾವದಿಂದ ಸ್ವೀಕರಿಸುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಎರಡೂ ಪಕ್ಷಗಳ ನಾಯಕರು ಅವರ ಬಗ್ಗೆ ಗಂಭೀರ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರುಗಳು ಕೇಳಿ ಬಂದಿವೆಯಾದರೂ ಸದ್ಯದ ಪರಿಸ್ಥಿತಿಯಲ್ಲಿ ಈ ಇಬ್ಬರೂ ನಾಯಕರನ್ನು ಕಣಕ್ಕಿಳಿಸುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗಿದೆ.

Facebook Comments