ಉತ್ತರ ಪಿನಾಕಿನಿ ನದಿ ಪುನಚ್ಚೇತನಕ್ಕೆ 10 ಕೋಟಿ ರೂ.ಗೆ ಪ್ರಸ್ತಾವನೆ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಸೆ.6- ನಗರದ ಉತ್ತರ ಪಿನಾಕಿನಿ ನದಿ ಪುನಶ್ಚೇತನಕ್ಕೆ 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ನಗರದ ಉತ್ತರ ಪಿನಾಕಿನಿ ನದಿ ಬದಿಗಳಲ್ಲಿ ನೆಟ್ಟಿರುವ ಬಿದಿರು ಸಸಿಗಳ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪಿನಾಕಿನಿ ನದಿ ಒತ್ತುವರಿ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಕೆಲವು ಕಿ.ಮೀ.ಗಳಷ್ಟು ತಂತಿ ಬೇಲಿ ಹಾಕಲಾಗಿದ್ದು, ಶ್ರೀನಿವಾಸ ಸಾಗರದಿಂದ ಆಂಧ್ರ ಗಡಿ ಭಾಗದವರೆಗೂ ಉತ್ತರ ಪಿನಾಕಿನಿ ನದಿಯ ಇಕ್ಕೆಲಗಳ ದಡಗಳಿಗೆ ತಂತಿ ಬೇಲಿ ಹಾಕಲು ಸುಮಾರು 10 ಕೋಟಿ ಅಂದಾಜು ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದ್ದು, ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ನದಿ ದಡದ ಇಕ್ಕೆಲಗಳಲ್ಲಿ ಈಗಾಗಲೇ 1.40 ಲಕ್ಷ ಬಿದಿರು ಸಸಿಗಳನ್ನು ನೆಡಲಾಗಿದ್ದು, ಇನ್ನೂ 1 ಲಕ್ಷ ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ಇದರಿಂದ ನದಿ ಒತ್ತುವರಿ ಹಾಗೂ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಲು ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.

ನಗರದ ಬೆಂಗಳೂರು-ಹಿಂದೂಪುರ ರಸ್ತೆಯ ಉತ್ತರ ಪಿನಾಕಿನಿ ನದಿಯ ಮೇಲು ಸೇತುವೆ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಿರುವುದಾಗಿ ತಿಳಿಸಿ, ಬ್ರಿಟೀಷರು ನಿರ್ಮಾಣ ಮಾಡಿರುವ ಸೇತುವೆಗಳು ಇಂದಿಗೂ ಗಟ್ಟಿಯಾಗಿವೆ.

ಆದರೆ, 50 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸೇತುವೆಗಳು ಕುಸಿಲಾರಂಭಿಸಿದೆ. ಕಾಮಗಾರಿ ಕಳಪೆಯಿಂದ ಕೂಡಿರುವುದೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಗರಸಭೆ ಸದಸ್ಯರಾದ ಖಲೀಂವುಲ್ಲಾ, ಸುಬ್ಬರಾಜು, ಮುಖಂಡರಾದ ಜಿ.ರಾಜಣ್ಣ, ನಾರಾಯಣಸ್ವಾಮಿ , ಕೃಷ್ಣಾರೆಡ್ಡಿ, ಬಕ್ಷಾ, ರಾಜಣ್ಣ ಮುಂತಾದವರು ಹಾಜರಿದ್ದರು.

Facebook Comments