ನಟ ಶಿವರಾಜ್‍ಕುಮಾರ್ ಶಬರಿಮಲೆ ಯಾತ್ರೆ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.14- ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಟ ಶಿವರಾಜ್‍ಕುಮಾರ್ ಅವರ ಶಬರಿಮಲೆ ಯಾತ್ರೆ ರದ್ದಾಗಿದೆ. ಶಿವರಾಜ್‍ಕುಮಾರ್ ಅವರ ತಂಡ ಫೆ.21ಕ್ಕೆ ಮಾಲೆ ಧರಿಸಿದ್ದು, ನಾಳೆ ಸಂಜೆ ಶಬರಿಮಲೆಗೆ ತೆರಳಬೇಕಿತ್ತು. ಆದರೆ, ಎಲ್ಲೆಡೆ ಕೊರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ರದ್ದು ಮಾಡಲಾಗಿದೆ. ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ಒಟ್ಟು 36 ಮಂದಿ ಮಾಲೆ ಹಾಕಿದ್ದೆವು. ನಾಳೆ ಯಾತ್ರೆಗೆ ಹೊರಡಬೇಕಿತ್ತು. ಕೊರೊನಾ ಎಲ್ಲೆಡೆ ಹರಡಿರುವುದರಿಂದ ಹಿರಿಯರ ಸಲಹೆ ಮೇರೆಗೆ ಯಾತ್ರೆ ಕೈಬಿಟ್ಟಿದ್ದೇವೆ. ನಾಳೆ ಸಂಜೆ ನಾವೆಲ್ಲರೂ ಮಾಲೆ ತೆಗೆಯುತ್ತೇವೆ ಎಂದು ಶಿವರಾಜ್‍ಕುಮಾರ್ ತಿಳಿಸಿದ್ದಾರೆ.

ಅಭಿಮಾನಿಗಳಲ್ಲಿ ಅಪ್ಪು ಮನವಿ :  ದೇಶಾದ್ಯಂತ ಕೊರೋನ ಭೀತಿ ಹಿನ್ನೆಲೆಯಲ್ಲಿ ನಾನು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ದಯವಿಟ್ಟು ಅಭಿಮಾನಿಗಳ್ಯಾರು ಮನೆ ಬಳಿ ಬರಬಾರದು ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಹುಟ್ಟು ಹಬ್ಬದಂದು ನಾನು ಮನೆಯಲ್ಲಿ ಇರುವುದಿಲ್ಲ. ದಯವಿಟ್ಟು ಮನೆ ಬಳಿ ಬಂದು ನಿರಾಶರಾಗದಿರಿ. ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿರೋಣ ಎಂದು ಕೋರಿದ್ದಾರೆ. ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ನಾವೆಲ್ಲರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಮಾ.17ರಂದು ಪುನೀತ್ ರಾಜ್‍ಕುಮಾರ್ ಅವರ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಸಂಖ್ಯೆಯಲ್ಲಿ ಅವರ ಮನೆ ಬಳಿ ಸೇರಿ ಹುಟ್ಟುಹಬ್ಬ ಆಚರಿಸಬೇಕೆಂದುಕೊಂಡಿದ್ದ ಅಭಿಮಾನಿಗಳಿಗೆ ಈ ಬಾರಿ ನಿರಾಸೆ ಉಂಟಾಗಿದೆ.

ಕರೊನಾ ವೈರಸ್​ ರಾಜ್ಯದಲ್ಲಿಯೂ ಕಾಣಿಸಿಕೊಂಡಿದೆ. ರಾಜ್ಯದ ಆರು ಜನರಲ್ಲಿ ವೈರಸ್​ ಪತ್ತೆಯಾಗಿದ್ದು, ವೈರಸ್​ ಹರಡದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಆದೇಶಿಸಿದೆ. ಸಭೆ ಸಮಾರಂಭಗಳಿಗೆ ಬ್ರೇಕ್​ ಹಾಕಿದ್ದ ಸರ್ಕಾರ ಇಂದಿನಿಂದ ಒಂದು ವಾರದ ಕಾಲ ಬರ್ತ್​ಡೇ, ಮದುವೆ ಕಾರ್ಯಕ್ರಮಗಳನ್ನೂ ಸಹ ನಡೆಸದಿರುವಂತೆ ಆದೇಶಿಸಿದೆ.

Facebook Comments