ಸಚಿವೆ ಸ್ಥಾನ ಸಿಗದೇ ನಿರಾಸೆಯಲ್ಲಿದ್ದ ಶೋಭಾ ಕರಂದ್ಲಾಜೆ ಅವರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜೂ. 12 : ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವ ಸ್ಥಾನದ ಕಣ್ಣಿಟ್ಟು ನಿರಾಶೆಗೊಳಗಾಗಿದ್ದ,ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಂತ್ರಿಗಿರಿ ಬದಲಿಗೆ ಲೋಕಸಭೆಯ ಬಿಜೆಪಿ ಸಂಸದರಿಗೆ ಮುಖ್ಯ ಸಚೇತಕಿ ಆಗಿ ನೇಮಿಸಲಾಗಿದೆ.

ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನದ ನಿರೀಕ್ಷೆ ಇತ್ತಾದರೂ ಪ್ರಧಾನಿ ಮೋದಿಯವರ ಸಂಪುಟದಲ್ಲಿ ಕೈತಪ್ಪಿತ್ತು.

ಬಿಜೆಪಿಯ 303 ಸಂಸದರಿಗೆ ವಿಪ್ ಜಾರಿ ಮಾಡುವ ಮಹತ್ವದ ಕಾರ್ಯ ಮುಖ್ಯ ಸಚೇತಕರಾಗಿದ್ದು, ಲೋಕಸಭೆಯ ನಾಯಕತ್ವದ ಚುನಾವಣೆಗಳು, ರಾಜ್ಯಸಭಾ ಸದಸ್ಯರ ಆಯ್ಕೆ ಮುಂತಾದ ವಿಷಯಗಳಲ್ಲಿ ಶೋಭಾ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ.

ರಾಜ್ಯದಿಂದ ನಿರ್ಮಲಾ ಸೀತಾರಾಮನ್ ಸೇರಿದಂತೆ ನಾಲ್ಕು ಜನರಿಗೆ ಸಚಿವ ಸ್ಥಾನ ನೀಡಿದ್ದರಿಂದ ಮತ್ತೊಬ್ಬರಿಗೆ ಮಂತ್ರಿಗಿರಿ ನೀಡಲು ಕಷ್ಟಕರ ಎಂದು ಮಂತ್ರಿಸ್ಥಾನದಷ್ಠೇ ಮಹತ್ವ ಪಡೆದ ಲೋಕಸಭೆ ಸಚೇತಕಿಯನ್ನಾಗಿ ನೇಮಕ ಮಾಡಲಾಗಿದೆ.

ಸಂಸತ್ತಿನ ಅಧಿವೇಶನ ನಡೆಯುವಾಗ ಆಡಳಿತ ಪಕ್ಷದ ಎಲ್ಲ ಸಂಸದರು ಸದನದಲ್ಲಿ ಹಾಜರಿರುವಂತೆ ನೋಡಿಕೊಳ್ಳುವುದು. ಮಹತ್ವದ ಮಸೂದೆಗಳ ಬಗ್ಗೆ ಚರ್ಚೆ ನಡೆಯುವಾಗ ಬಿಜೆಪಿ ಮತ್ತು ಎನ್​​ಡಿಎ ಮೈತ್ರಿಕೂಟದ ಪಕ್ಷಗಳ ಸಂಸದರು ಕಾರ್ಯ ಕಲಾಪದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು.

ಸದನದ ಕಾರ್ಯ ಕಲಾಪಗಳ ಬಗ್ಗೆ ಸ್ಪೀಕರ್ ಅವರಿಗೆ ಆಡಳಿತ ಪಕ್ಷದಿಂದ ನೆರವು ನೀಡುವುದು ಸಚೇತಕರ ಜವಾಬ್ದಾರಿಯಾಗಿರುತ್ತದೆ. ಮೋದಿ ಸಂಪುಟದಲ್ಲಿ ಮಂತ್ರಿಗಿರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶೋಭಾಗೆ ಯಾವುದೇ ಸ್ಥಾನ ಸಿಗದೇ ನಿರಾಸೆಯಾಗಿತ್ತು.

ಸಚೇತಕರ ಹುದ್ದೆಗೆ ಕೇಂದ್ರದ ರಾಜ್ಯ ಸಚಿವ ಪದವಿಯ ಸ್ಥಾನಮಾನ ನೀಡಲಾಗಿರುತ್ತದೆ. ಕೇಂದ್ರ ಸಚಿವ ಸ್ಥಾನ ಸಿಗದೆ ಬೇಸರಗೊಂಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಲೋಕಸಭೆ ಸಚೇತಕಿ ಸ್ಥಾನ ಸ್ಪಲ್ಪ ಮಟ್ಟಿನ ತೃಪ್ತಿ ನೀಡಿದೆ ಎನ್ನಲಾಗಿದೆ.

ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಎರಡನೇ ಬಾರಿ ಶೋಭಾ ಅವರು ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಇದೇ ಮೊದಲ ಬಾರಿಗೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರದಲ್ಲಿ ಪ್ರಮುಖ ಹುದ್ದೆಯೊಂದನ್ನು ನೀಡಲಾಗಿದೆ.

ಆದರೆ ಈ ಮುಖ್ಯ ಸಚೇತಕಿ ಹುದ್ದೆ ಸಂಪುಟಕ್ಕೆ ಸಂಬಂಧಿಸಿದ್ದಲ್ಲ. ಕಳೆದ ಅವಧಿಯಲ್ಲಿ ಅನುರಾಗ್ ಠಾಕೂರ್ ಅವರನ್ನು ಮುಖ್ಯ ಸಚೇಕರನ್ನಾಗಿ ಮಾಡಲಾಗಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin