ಲೋಕಸಭೆಯಲ್ಲಿ ಕಾವೇರಿ ವಿವಾದ ಪ್ರಸ್ತಾಪ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.18- ಕರ್ನಾಟಕದ ಅನೇಕ ಭಾಗಗಳಲ್ಲಿ ಮುಂಗಾರು ಮಳೆ ಕೊರತೆಯಿಂದ ನೀರಿಗೆ ಹಾಹಾಕಾರ ಎದ್ದಿದ್ದು, ಜಲಸಂಕಷ್ಟ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿಂದು ಈ ವಿಷಯ ಪ್ರಸ್ತಾಪಿಸಿದ ಅವರು, ನೀರಿನ ಸಮಸ್ಯೆ ಜತೆಗೆ ತಮಿಳುನಾಡು-ಕರ್ನಾಟಕ ಕಾವೇರಿ ವಿವಾದದ ಬಗ್ಗೆಯೂ ಮಾತನಾಡಿದರು.
ಕಾವೇರಿ ವಿವಾದದ ಬಗ್ಗೆ ತಮಿಳುನಾಡು ವಿನಾಕಾರಣ ತಗಾದೆ ತೆಗೆಯುತ್ತಿದೆ ಎಂದು ಆ ರಾಜ್ಯದ ಸದಸ್ಯರು ಕುಳಿತಿದ್ದ ಸ್ಥಳದತ್ತ ಬೊಟ್ಟುಮಾಡಿ ತೋರಿಸಿದರು.

ಇದಕ್ಕೆ ಹಾಸ್ಯಮಿಶ್ರಿತ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಓಂ ಬಿರ್ಲಾ ಅಲ್ಲಿ ಜಗಳವಾಡಿ, ಇಲ್ಲಿ ಬೇಡ ಎಂದು ತಮಾಷೆ ಮಾಡಿದಾಗ ಸದನದಲ್ಲಿ ಹಾಸ್ಯದ ಹೊನಲು ಹರಿಯಿತು.

ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಮಾತನಾಡಿ, ದೇಶದ ಎಲ್ಲ ರಾಜ್ಯಗಳಲ್ಲೂ ನೀರಿನ ಸಮಸ್ಯೆ ಉದ್ಭವಿಸಿದೆ. ಅಲ್ಲದೆ, ಜಲ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರಿವೆ. ರಾಜ್ಯಗಳು ಪರಸ್ಪರ ಸೌಹಾರ್ದತಯುತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Facebook Comments