ಲವ್ ಜಿಹಾದ್ : ಕಾಸರಗೋಡಿನ ಸಂತ್ರಸ್ಥೆಯನ್ನು ಸಿಎಂಗೆ ಭೇಟಿ ಮಾಡಿಸಿದ ಶೋಭಾ, ಕಮಿಷನರ್‌ಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.5- ನಗರದಲ್ಲಿ ವ್ಯಾಪಾರ ಮಾಡುತ್ತಿರುವ ಕೇರಳ ರಾಜ್ಯದ ಕಾಸರಗೋಡಿನ ಯುವಕರಿಬ್ಬರು ಅಪ್ರಾಪ್ತ ಬಾಲಕಿಯನ್ನು ನಂಬಿಸಿ ಅತ್ಯಾಚಾರ ಮಾಡಿ ನಂತರ ಮತಾಂತರ ಆಗುವಂತೆ ಒತ್ತಡ ಹೇರುತ್ತಿದ್ದಾರೆ, ಕೂಡಲೇ ಅವರನ್ನು ಬಂಧಿಸಬೇಕು ಎಂದು ಚಿಕ್ಕಮಗಳೂರು -ಉಡುಪಿ ಕ್ಷೇತ್ರದ ಸಂಸದೆ ಶೋಭಾಕರಂದ್ಲಾಜೆ ಒತ್ತಾಯಿಸಿದ್ದಾರೆ.

ಇಂದು ಬೆಳಗ್ಗೆ ಸಂತ್ರಸ್ತ ಬಾಲಕಿ ಹಾಗೂ ಆಕೆಯ ಕುಟುಂಬದ ಜೊತೆ ಮುಖ್ಯಮಂತ್ರಿ .ಯಡಿ ಯೂರಪ್ಪ ಅವರನ್ನು ಭೇಟಿ ಮಾಡಿ ಆನಂತರ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವ ರನ್ನು ಕಚೇರಿಯಲ್ಲಿ ಭೇಟಿ ಮಾಡಿ ಮಾಹಿತಿ ನೀಡಿದರು. ಕಾಸರಗೋಡಿನ 17 ವರ್ಷದ ಬಾಲಕಿ ಓದುತ್ತಿರುವಾಗಲೇ ಆಕೆಯನ್ನು ಪರಿಚಯಿಸಿಕೊಂಡ ರಿಷಭ್ ಮತ್ತು ಮಸೂದ್ ಎಂಬ ಇಬ್ಬರು ಯುವಕರು ಪುಸಲಾಯಿಸಿ ಕಾರಿನಲ್ಲಿ ಕರೆದುಕೊಂಡು ಮಂಗಳೂರು, ಬೆಂಗಳೂರಿನಲ್ಲೆಲ್ಲ ಸುತ್ತಾಡಿಸಿ, ಮತ್ತುಬರುವ ಔಷಧಿ ನೀಡಿ ಅತ್ಯಾಚಾರ ನಡೆಸಿದ್ದಾರೆ. ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಆಕೆಯನ್ನು ಬೆದರಿಸಿದ್ದಾರೆ.

ಬಾಲಕಿಯ ತಂದೆಯನ್ನು ಹೊರತುಪಡಿಸಿ ಇಡೀ ಕುಟುಂಬದ ಸದಸ್ಯರು ಇಸ್ಲಾಂಗೆ ಮತಾಂತರಗೊಳ್ಳಬೇಕು. ಇಲ್ಲವಾದರೆ ವಿಡಿಯೋ ಬಹಿರಂಗಪಡಿಸುತ್ತೇವೆ, ಮನೆಗೆ ಬೆಂಕಿ ಹಚ್ಚಿ, ಕೊಂದು ಹಾಕುತ್ತೇವೆ ಎಂದು ಬೆದರಿಸುತ್ತಿದ್ದಾರೆ ಎಂದು ಶೋಭಾಕರಂದ್ಲಾಜೆ ಹೇಳಿದರು. ಬಾಲಕಿಯನ್ನು ಬೆಂಗಳೂರಿಗೆ ಕರೆತಂದು ಕೃತ್ಯ ಎಸಗಲಾಗಿದೆ. ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಕ್ವೇರಿಯಂ ವ್ಯಾಪಾರ ಮಾಡುತ್ತಿರುವ ಮಾಹಿತಿ ಇದೆ. ಬಾಲಕಿ ಹೇಳುವ ಪ್ರಕಾರ ಗಾಂಜಾ ವ್ಯಾಪಾರದಲ್ಲೂ ಅವರು ತೊಡಗಿರಬಹುದು.

ಅವರು ಏನೇನೋ ಸೇದುತ್ತಿದ್ದರು, ಮತ್ತಿನಲ್ಲಿರುತ್ತಿದ್ದರು ಎಂದು ಬಾಲಕಿ ಹೇಳುತ್ತಿದ್ದಾಳೆ. ಇವರ ವ್ಯಾಪಾರವೇನು, ಸಂಪರ್ಕಗಳೇನು? ಮಂಗಳೂರು, ಬೆಂಗಳೂರಿನಲ್ಲಿ ಇನ್ನೂ ಎಷ್ಟು ಪ್ರಕರಣಗಳಲ್ಲಿ ಈ ರೀತಿ ಮಾಡಿರಬಹುದು ಎಂಬೆಲ್ಲ ವಿಷಯಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಜನರೂ ಇದ್ದಾರೆ.. ಇಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುವವರನ್ನು ಬಿಡಬಾರದು. ಈ ಆರೋಪಿಗಳಿಗೆ ಮಂಗಳೂರಿನಲ್ಲಿ ಇನ್ನು ಎಷ್ಟು ಈ ರೀತಿಯ ಸಂಪರ್ಕಗಳಿವೆ, ಬೆಂಗಳೂರಿನಲ್ಲಿ ಎಷ್ಟು ಹುಡುಗಿಯರ ಜೊತೆ ಈ ರೀತಿ ಆಟವಾಡಿದ್ದಾರೆ ಎಂಬೆಲ್ಲ ವಿಷಯಗಳು ತನಿಖೆಯಾಗಬೇಕಿದೆ. ಸಂತ್ರಸ್ತ ಬಾಲಕಿ ಮತ್ತು ಆಕೆಯ ಕುಟುಂಬದವರು ನನ್ನನ್ನು ಸಂಪರ್ಕಿಸಿದಾಗ ನಾನು ಪ್ರವಾಸದಲ್ಲಿದ್ದೆ. ಇಂದು ಅವರು ನನ್ನನ್ನು ಭೇಟಿ ಮಾಡಿದರು. ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗಿದ್ದೆ. ಮುಖ್ಯಮಂತ್ರಿಯವರು ಕೂಡ ಪೆÇಲೀಸ್ ಅಧಿಕಾರಿಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ತಪ್ಪಿತಸ್ಥರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಘಟನೆ ನಡೆದಿರುವುದರಿಂದ ಬಾಲಕಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ದೂರು ನೀಡುತ್ತಿದ್ದಾಳೆ. ಆಕೆ 2001ರ ಜುಲೈನಲ್ಲಿ ಜನಿಸಿದ್ದಾಳೆ. ಕಳೆದ ಒಂದು ವರ್ಷದಿಂದಲೂ ಆಕೆಯ ಮೇಲೆ ಅತ್ಯಾಚಾರ ದೌರ್ಜನ್ಯ, ಬೆದರಿಕೆ ನಡೆದಿದೆ. ಹಾಗಾಗಿ ಫೋಕ್ಸೋ ಮತ್ತು ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಕ್ರಿಮಿನಲ್ ತಿದ್ದುಪಡಿ ಬಿಲ್ 2019ರ ಪ್ರಕಾರ ಅತ್ಯಾಚಾರ ಮತ್ತು ಬಲವಂತದ ಮತಾಂತರಕ್ಕೆ ಪ್ರಯತ್ನ ಪ್ರಕರಣಗಳಡಿ ಕೇಸು ದಾಖಲಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿರುವುದಾಗಿ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಗೆ ಸಂತ್ರಸ್ತ ಬಾಲಕಿ ಹಾಗೂ ಕುಟುಂಬ ಸದಸ್ಯರನ್ನು ಕರೆದುಕೊಂಡು ಹೋಗಿದ್ದೆ. ಅವರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು. ಬೆಂಗಳೂರು ನಗರ ಪೊಲೀಸರು ಸಂತ್ರಸ್ತ ಬಾಲಕಿಯಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments