ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಬೇಸತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ..? ಶೋಭಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.23- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್‍ನ ಕೆಲವು ನಾಯಕರ ನಡವಳಿಕೆಯಿಂದ ಬೇಸತ್ತು ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಈಗ ಆಂತರಿಕ ಸಮಸ್ಯೆ ಎದುರಾಗಿದೆ. ಒಬ್ಬರಿಗೊಬ್ಬರು ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಪ್ರಕರಣ ಇದಕ್ಕೆ ಉದಾಹರಣೆ ಎಂದರು.

ಮುಖ್ಯಮಂತ್ರಿ ಕುರ್ಚಿ ಮೇಲೆ ಸಿದ್ದರಾಮಯ್ಯ ಯಾವಾಗ ಕಣ್ಣಿಟ್ಟರೋ ಆವಾಗಲೇ ಸಮ್ಮಿಶ್ರ ಸರ್ಕಾರದ ಆಯಸ್ಸು ಕುಸಿದಂತೆ. ಈ ಕುರ್ಚಿಯ ಮೇಲೆ ಒಂದು ಕಡೆ ಡಿ.ಕೆ.ಶಿವಕುಮಾರ್, ಇನ್ನೊಂದು ಕಡೆ ಎಚ್.ಡಿ.ರೇವಣ್ಣ ಮತ್ತೊಂದು ಕಡೆ ಡಾ.ಜಿ.ಪರಮೇಶ್ವರ್ ಕಣ್ಣಿಟ್ಟಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪರಿಸ್ಥಿತಿ ದೇವರೇ ಕಾಪಾಡಬೇಕೆಂದು ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಅಸ್ಥಿರಗೊಳ್ಳಬಹುದೆಂದು ನಿರೀಕ್ಷೆ ಮಾಡಿದ್ದೆವು. ಆದರೆ ಅದಕ್ಕೂ ಮುನ್ನವೇ ಪತನವಾದರೂ ಅಚ್ಚರಿ ಇಲ್ಲ. ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹೇಳಿದರು.

ನಾವು ಆಪರೇಷನ್ ಕಮಲ ನಡೆಸಬೇಕಾದ ಅಗತ್ಯವಿಲ್ಲ. ಶಾಸಕರೇ ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿರುವಾಗ ನಮಗೆ ಅದರ ಅವಶ್ಯಕತೆ ಇಲ್ಲ. ಪ್ರತಿಪಕ್ಷವಾಗಿ ಬಿಜೆಪಿ ತನ್ನ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ಏನೇ ಹೇಳಿಕೊಂಡರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ