ಸಂಸತ್, ವಿಧಾನಸಭೆಯಲ್ಲಿ ಮಹಿಳೆಯರ ರಕ್ಷಣೆ, ಹಕ್ಕುಗಳ ಚರ್ಚೆಯಾಗಲಿ : ಸಂಸದೆ ಶೋಭಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.8- ಇಡೀ ದೇಶ ಹಾಗೂ ಪ್ರಪಂಚದಲ್ಲಿ ಮಹಿಳೆಯರ ಹಕ್ಕಿನ ಬಗ್ಗೆ ಮತ್ತು ಮಹಿಳೆಯರ ಇವತ್ತಿನ ಸಮಸ್ಯೆ ಬಗ್ಗೆ ಬೇರೆ ಬೇರೆ ರೀತಿಯ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದು, ಮಹಿಳೆಯರ ರಕ್ಷಣೆ ಮತ್ತು ಹಕ್ಕುಗಳ ಕುರಿತು ಸಂಸತ್ತು ಮತ್ತು ವಿಧಾನಸಭೆಗಳಲ್ಲೂ ಚರ್ಚೆಯಾಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಇಂದು ನಗರದ ಯಶವಂತಪುರದ ಬಸ್ ನಿಲ್ದಾಣ ನೆಲಮಹಡಿಯಲ್ಲಿರುವ ಕೆಎಸ್‍ಟಿಡಿಸಿ ಕಚೇರಿಯ ಮುಂಭಾದಲ್ಲಿ ಕರ್ನಾಟಕ ರಾಜ್ಯ ಪ್ರವಾಸೊದ್ಯಮ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಏರ್ಪಡಿಸಿದ್ದ ಮಹಿಳಾ ವಿಶೇಷ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಿರ್ಭಯ ಪ್ರಕರಣವು ಬಹಳ ದುಃಖಕರವಾದ ವಿಚಾರ. ಎಂಟು ವರ್ಷ ಕಳೆದರೂ ನಿರ್ಭಯ ಹಂತಕರಿಗೆ ಗಲ್ಲು ಶಿಕ್ಷೆಯಾಗಿಲ್ಲ.

ನಮಗೆ ವಿಶ್ವಾಸ ವಿದೆ. ಮಾ.20ರಂದು ಶೇಕಡ ನೂರಕ್ಕೆ ನೂರರಷ್ಟು ಅವರಿಗೆ ಗಲ್ಲು ಶಿಕ್ಷೆಯಾಗುತ್ತದೆ. ಕಾನೂನು ಕೈಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ಹಕ್ಕು ಮತ್ತು ರಕ್ಷಣೆ ಬೇಕು ಎಂದು ಹೇಳಿದರು. ಪ್ರವಾಸದಲ್ಲಿ ವಿವಿಧ ಇಲಾಖೆಯ ನಿಗಮಗಳಲ್ಲಿ ಕೆಳದರ್ಜೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯರು, ಬಿಬಿಎಂಪಿಯ ಮಹಿಳಾ ಸ್ವಚ್ಚತಾ ಗಾರರು, ರೈತ ಮಹಿಳೆಯರು, ಅಂಗನವಾಡಿಯ ಕಾರ್ಯಕರ್ತೆಯರು, ಸ್ಲಮ್ ನಿವಾಸಿಗಳು ಮತ್ತು ವಿವಿಧ ರೀತಿಯಲ್ಲಿ ಹಗಲಿರುಳು ದುಡಿಯುತ್ತಿರುವ ಮಹಿಳೆಯರಿಗೆ ಈ ಪ್ರವಾಸ ಆಯೋಜಿಸಲಾಗಿದೆ.

ಕೆಎಸ್‍ಟಿಡಿಸಿಯ ಅಧ್ಯಕ್ಷೆ ಶೃತಿ ಕೃಷ್ಣ ಮಾತನಾಡಿ, ಮಹಿಳಾ ಪ್ರವಾಸಿಗರನ್ನು ಉತ್ತೇಜಿಸಲು ನಿಗಮದಿಂದ ನಿರ್ವಹಿಸುತ್ತಿರುವ ಮಯೂರ ಹೋಟೆಲ್‍ಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ವಾಸ್ತವ ಹೂಡುವ ಮಹಿಳಾ ಪ್ರವಾಸಿಗರಿಗೆ ಒಟ್ಟು ದರದಲ್ಲಿ 50% ರಿಯಾಯಿತಿ ಕಲ್ಪಿಸಲಾಗಿದೆ. ಮಹಿಳಾ ಪ್ರವಾಸಿಗ ರನ್ನು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿಗಮವು ವರ್ಷಪೂರ್ತಿ ನಿಗಮದ ಮಯೂರ ಹೋಟೆಲ್‍ಗಳಲ್ಲಿ ವಾಸ್ತವ ಪಡೆದುಕೊಳ್ಳುವ ಮಹಿಳಾ ಪ್ರವಾಸಿಗರಿಗೆ ಒಟ್ಟು ಕೊಠಡಿ ದರದ ಮೇಲೆ 25% ರಿಯಾಯಿತಿಯಾಗಿ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು. ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments