ಡಿಕೆ ಬ್ರದರ್ಸ್ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.30- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡದಿಂದ ಡಿಕೆ ಸಹೋದರರನ್ನು ಹೊರಹಾಕುವಂತೆ ಚುನಾವಣಾ ಆಯೋಗಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು. ನಗರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 19 ರಂದು ಮುನಿರತ್ನ ಅವರು ಕೂಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಖಾಡದಿಂದ ಈ ಡಿಕೆ ಸಹೋದರರನ್ನು ಹೊರಕಳಿಸಿ ಎಂದು ಒತ್ತಾಯಿಸಿದರು.

ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ, ಆದ್ರೆ ಕಾಂಗ್ರೆಸ್ನವರು ಗೆಲ್ಲಬೇಕು ಎಂದು ವಾತಾವರಣ ಕೆಡಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಚುನಾವಣೆ ನಡೆಯುತ್ತಿದ್ದು, ಅವರ ಆಸ್ತಿತ್ವ ಉಳಿಸಿಕೊಳ್ಳಲು ಅಕ್ರಮಗಳ ಮೇಲೆ ಅಕ್ರಮ ಮಾಡುತ್ತಿದ್ದಾರೆ.

ಅಕ್ಟೋಬರ್ 19 ರಂದು ಮುನಿರತ್ನ ಚುನಾವಣಾ ಅಯೋಗಕ್ಕೆ ದೂರು ಸಲ್ಲಿಸಿದ್ದು, ಅದರಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕಾಂಗ್ರೆಸ್ ವೋಟರ್ ಐಡಿ ಕಾಡ್ರ್ಗಳನ್ನು ಸಂಗ್ರಹಿಸಿ ನಮ್ಮ ಅಭ್ಯರ್ಥಿ ಮೇಲೆ ಹೊರೆಸಿದ್ದಾರೆ ಎಂದು ಶೋಭಾ ಆರೋಪಿಸಿದರು.

ಎಂಎಲ್ಸಿ ನಾರಾಯಣಸ್ವಾಮಿ ಅವರು ವೋಟರ್ ಐಡಿ ಕಾಡ್ರ್ಗಳನ್ನು ಸಂಗ್ರಹಿಸಿರುವ ಮಾಹಿತಿ ನೀಡಿದ್ದಾರೆ. ನಾರಾಯಣಸ್ವಾಮಿ ಹಾಗೂ ಇತರರು ಒಂದು ಸಾವಿರಕ್ಕೂ ಹೆಚ್ಚು ಐಡಿ ಕಾಡ್ರ್ಗಳನ್ನು ಸಂಗ್ರಹಿಸಿ ಚಿತ್ರೀಕರಣ ಮಾಡಿ ಅಯೋಗಕ್ಕೆ ನೀಡಿದ್ದಾರೆ. ಅದು ಸರಿಯಲ್ಲ ಎಂಬುದು ಈಗಾಗಲೇ ಅಯೋಗಕ್ಕೂ ಗೊತ್ತಿದೆ. ರಾಜರಾಜೇಶ್ವರಿನಗರ, ನಂದಿನಿ ಲೇಔಟ್ ಹಾಗೂ ಯಶವಂತಪುರ ಪೊಲೀಸ್ ಠಾಣೆಗಳು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಈಗಾಗಲೇ ಪೊಲೀಸರ ಮೇಲೂ ದಬ್ಬಾಳಿಕೆ, ಆವಾಜ್ ಹಾಕಲಾಗುತ್ತಿದೆ. ವರ್ಗಾವಣೆ ಮಾಡಿಸುವುದು, ಆವಾಜ್ ಹಾಕುವುದು ಮಾಡುತ್ತಲೇ ಬರುತ್ತಿದ್ದಾರೆ ಎಂದು ಸಂಸದೆ ಕಿಡಿಕಾರಿದರು. ಅಕ್ರಮ ಮಾಡುತ್ತಿರುವುದು ಡಿ.ಕೆ. ಬ್ರದರ್ಸ್, ನಮ್ಮ ಅಭ್ಯರ್ಥಿಯಲ್ಲ. ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ಮಾಡುವುದು, ಒತ್ತಡ ಹಾಕುವುದನ್ನು ಮಾಡಬಾರದು.

ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಕ್ಷೇತ್ರಕ್ಕೆ ಕಾಲಿಡಬಾರದು ಎಂಬುದು ನಮ್ಮ ಅಗ್ರಹ. ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅಕ್ರಮ ಮಾಡುವುದರಲ್ಲಿ ನಿಸ್ಸೀಮರು. ಹೀಗಾಗಿ ಅವರು ಕ್ಷೇತ್ರಕ್ಕೆ ಬರಬಾರದು ಎಂದು ಶೋಭಾ ಒತ್ತಾಯಿಸಿದರು.

ವಿಡಿಯೋ ಮತ್ತು ಅಡಿಯೋ ನಮ್ಮ ಬಳಿ ಇದ್ದು, ಅದನ್ನು ಅಯೋಗಕ್ಕೆ ಕೊಟ್ಟಿದ್ದೇವೆ. ಡಿಕೆ ಬ್ರದರ್ಸ್ ಅಕ್ರಮ ಮಾಡುತ್ತಾರೆ ಎಂದು ಖುದ್ದು ಅವರ ಪಕ್ಷದ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿಗೆ ಆದ್ಯತೆ ಕೊಡಬೇಕೆ ವಿನಃ ಭಾವನೆಗಳಿಗೆ ಅಲ್ಲ. ಅವರವರ ಮನೆಗಳಲ್ಲಿ ಏನೋ ಘಟನೆಗಳು ನಡೆದಿರುತ್ತವೆ. ಅವುಗಳನ್ನು ಭಾವನಾತ್ಮಕವಾಗಿ ಬಳಸಿಕೊಂಡು ಮತ ಕೇಳೋದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿ ಜನರು ಮತ ನೀಡಬೇಕು ಎಂದು ಅಭ್ಯರ್ಥಿಗಳ ಕಣ್ಣೀರು ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

Facebook Comments