ಪ್ರಜ್ವಲ್ ರೇವಣ್ಣ ರಾಜೀನಾಮೆ ಗಿಮಿಕ್ ಅಷ್ಟೇ : ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮೇ 25- ಚಿಕ್ಕಮಗಳೂರಿಗೆ ಎಕ್ಸ್‍ಪ್ರೆಸ್ ರೈಲು ಸಂಚಾರ, ವೇಳಾಪಟ್ಟಿಯಲ್ಲಿ ಬದಲಾವಣೆ ಸೇರಿದಂತೆ ರೈಲ್ವೆಗೆ ಸಂಬಂಧಪಟ್ಟ ಕೆಲಸಗಳು ಹಾಗೂ ಕಾಫಿ ಬೆಳೆಗಾರರ ಸಬ್ಸಿಡಿ ಕಂತು ಬಿಡುಗಡೆಗೆ ಶ್ರಮಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಎರಡನೆ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅವರು ನಗರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಕಾಫಿ ಮಂಡಳಿಯನ್ನು ಉಳಿಸಿಕೊಂಡು ಮಂಡಳಿಯ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಕೊಡಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ . ಅಡಿಕೆ ಆಮದು ಕಡಿಮೆಗೊಳಿಸಲು ಯತ್ನಿಸುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಮೈತ್ರಿಗೆ ಸೋಲಾಗಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಪ್ರಜ್ವಲ್ ರೇವಣ್ಣ ರಾಜೀನಾಮೆ ಕೊಡುವುದಾಗಿ ಹೇಳಿರುವುದು ಕೇವಲ ಗಿಮಿಕ್. ಮೊನ್ನೆಯಷ್ಟೆ ಅವರು ಆಯ್ಕೆಯಾಗಿದ್ದಾರೆ.

ಮಾರನೆ ದಿನವೇ ರಾಜೀನಾಮೆ ಕೊಡುವುದಾಗಿ ಹೇಳಿರುವುದು ನಂಬಲಾಗದು ಪ್ರಚಾರ ಮಾಡಿ ಯಾರೂ ರಾಜೀನಾಮೆ ಕೊಡುವುದಿಲ್ಲ. ಮತ್ತೆ ಚುನಾವಣೆ ನಡೆದರೆ ಹಾಸನದ ಜನತೆಗೆ ಹೊರೆಯಾಗುತ್ತದೆ. ಅದರ ಹೊಣೆಯನ್ನು ಜೆಡಿಎಸ್‍ನವರು ಹೊರಬೇಕು ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಜನ ಅತಿ ಹೆಚ್ಚು ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಎರಡೂ ಜಿಲ್ಲೆಗಳ ಸಮಸ್ಯೆಗಳಿಗೆ ಕೇಂದ್ರದಿಂದ ಸಿಗುವ ಪರಿಹಾರವನ್ನು ತಂದು ಸರಿಪಡಿಸುತ್ತೇನೆ ಎಂದರು.  ಶೀಘ್ರವೇ ಚಿಕ್ಕಮಗಳೂರಿನಲ್ಲಿ ಇಎಸ್‍ಐ ಔಷಧಾಲಯ(ಡಿಸ್ಪೆನ್ಸರಿ) ಪ್ರಾರಂಭಿಸುವುದೂ ಅಲ್ಲದೆ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಶೋಭಾ ಕರಂದ್ಲಾಜೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ವೇಳೆ ಮುಖಂಡರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಶೋಭಾಕರಂದ್ಲಾಜೆಗೆ ಶುಭ ಕೋರಿದರು.

Facebook Comments