ಸಚಿವ ಸ್ಥಾನ ಕೊಡುವುದು ಪ್ರಧಾನಿಗೆ ಬಿಟ್ಟ ವಿಚಾರ : ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮೇ 24- ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿ ಮತ್ತೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ತಮ್ಮ ಬಲ ಪ್ರದರ್ಶಿಸಿದ್ದಾರೆ.

ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಎದುರಾಗಿದ್ದ ವಿರೋಧಗಳು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಬಂದಿದ್ದ ಟೀಕೆಗಳು ಹಾಗೂ ಕೆಲವು ನಾಯಕರ ಅಸಮಾಧಾನದ ನಡುವೆಯೂ ಪ್ರಬಲ ಹೋರಾಟ ನಡೆಸಿದ ಶೋಭಾ ಕರಂದ್ಲಾಜೆ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಿ ಬಿಜೆಪಿ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ನಿನ್ನೆ ಹೊರಬಿದ್ದ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಂಡ ಜಯ ಗಳಿಸಿ ಜಿಲ್ಲೆಯಾದ್ಯಂತ ಕಾರ್ಯಕರ್ತರ ಸಂಭ್ರಮಕ್ಕೆ ಕಾರಣವಾಯಿತು.ಪಟಾಕಿ ಸಿಡಿಸಿ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ರಾಜ್ಯದಿಂದ ಗೆದ್ದಿರುವವರು ಸಾಕಷ್ಟು ಮಂದಿ ಇದ್ದಾರೆ. ಸಚಿವ ಸ್ಥಾನ ಕೊಡುವುದು ಬಿಡುವುದು ಅಮಿತ್ ಷಾ ಹಾಗೂ ನರೇಂದ್ರ ಮೋದಿ ಅವರಿಗೆ ಬಿಟ್ಟ ನಿರ್ಧಾರ. ತಾವು ಚುನಾವಣೆಗೆ ಸ್ಪರ್ಧಿಸುವ ಮೊದಲು ಗೋ ಬ್ಯಾಕ್ ಶೋಭಕ್ಕ ಎಂದು ಪಕ್ಷದೊಳಗೆ ಕೆಲವರನ್ನು ಎತ್ತಿಕಟ್ಟಿ ಸ್ವಾರ್ಥ ಮೆರೆದಿದ್ದರು.

ಟಿಕೆಟ್ ಕೇಳುವುದು ತಪ್ಪಲ್ಲ. ಆದರೆ, ಕೇಳುವ ರೀತಿ ಸರಿ ಇರಲಿಲ್ಲ. ಇದಕ್ಕೆ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ. ಈಗ ಚುನಾವಣೆ ಮುಗಿದಿದೆ. ಫಲಿತಾಂಶವೂ ಬಂದಿದೆ. ಈಗ ನಡೆದಿರುವುದನ್ನು ಮರೆತು ಎಲ್ಲರೊಂದಿಗೆ ಒಂದಾಗಿ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಲಾಗುವುದು ಎಂದರು.

ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ಗೆ ಕಾಂಗ್ರೆಸ್ ಅನ್ಯಾಯ ಮಾಡಿಲ್ಲ. ಮೊದಲ ಬಾರಿ ಗೆದ್ದರೂ ಸಚಿವರನ್ನಾಗಿ ಮಾಡಿ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಉತ್ತಮ ಕುಟುಂಬದ ಹಿನ್ನೆಲೆ ಹಾಗೂ ಗೌರವ ಹೊಂದಿದ್ದ ಅವರು ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಿದ್ದು ಯಕ್ಷ ಪ್ರಶ್ನೆ ಎಂದರು.

2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 2019ರಲ್ಲಿ ಶೇ.1.42ರಷ್ಟು ಮತದಾನ ಹೆಚ್ಚಾಗಿದೆ. ಶೋಭಾ ಕರಂದ್ಲಾಜೆ ಈ ಬಾರಿ 3,49,549 ಅಂತರದಿಂದ ಗೆಲುವು ಸಾಧಿಸಿದ್ದು, ಕಳೆದ ಬಾರಿಗಿಂತ ಈಗ ಹೆಚ್ಚು ಮತ ಗಳಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‍ನ ಜಯಪ್ರಕಾಶ್ ಹೆಗಡೆ ವಿರುದ್ಧ ಸ್ಪರ್ಧಿಸಿ 1,81,643 ಮತಗಳ ಅಂತರದಲ್ಲಿ ಜಯ ಗಳಿಸಿದ್ದರು.

ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸ್ಪರ್ಧೆಯಿಂದ ಗೆಲುವಿನ ಅಂತರ ಕಡಿಮೆಯಾಗಬಹುದು ಎನ್ನಲಾಗಿತ್ತು. ಆದರೆ, ಮತದಾರರು ಲೆಕ್ಕಾಚಾರ ಬುಡಮೇಲು ಮಾಡಿ ಹೆಚ್ಚು ಮತ ನೀಡಿರುವುದು ಸ್ಪಷ್ಟವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin