ಡಿಜೆ ಹಳ್ಳಿಯಲ್ಲಿ ಕೋಮುಗಲಭೆ ಮರುಕಳಿಸಿದರೆ ಕಂಡಲ್ಲಿ ಗುಂಡು..! : ಪೊಲೀಸರಿಗೆ ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.12- ಒಂದು ವೇಳೆ ಡಿಜೆಹಳ್ಳಿ ಹಾಗೂ ಕೆಜೆಹಳ್ಳಿಯಲ್ಲಿ ಕೋಮುಗಲಭೆ ಮರುಕಳಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಸಾರ್ವಜನಿಕರ ಹಿತರಕ್ಷಣೆಗೆ ದುಷ್ಕರ್ಮಿಗಳ ಮೇಲೆ ಕಂಡಲ್ಲಿ ಗುಂಡು(ಶೂಟ್ ಅಂಡ್ ಸೈಟ್)ಹೊಡೆಯಲು ಹಿಂದೆಮುಂದೆ ನೋಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಜನಜೀವನ ಸಹಜಸ್ಥಿತಿಗೆ ಮರಳಬೇಕು. ದುಷ್ಕರ್ಮಿಗಳು ಮತ್ತೆ ತಮ್ಮ ದುಂಡಾವರ್ತನೆಯನ್ನು ಪುನರಾವರ್ತಿಸಿದರೆ ಅಂಥವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಲು ಮೀನಾಮೇಷ ಎಣಿಸಬೇಡಿ ಎಂದು ಸೂಚಿಸಿದ್ದಾರೆ.

ಘಟನೆ ಕುರಿತಂತೆ ಇಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಗುಪ್ತಚರ ವಿಭಾಗದ ಮುಖ್ಯಸ್ಥ ದಯಾನಂದ್, ಕಾನೂನು ಸುವ್ಯವಸ್ಥೆ ವಿಭಾಗದ ಅಕಾರಿಗಳು ಮಾಹಿತಿ ನೀಡಿದರು.

ಸದ್ಯ ಎರಡುಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಫ್ರ್ಯೂ ಜಾರಿ ಮಾಡಲಾಗಿದ್ದು, ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಗಲಭೆ ನಡೆದ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪ್ರಕರಣ ಸಂಬಂಧ ಈವರೆಗೂ 110 ಮಂದಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದೇವೆ.

ಗಲಭೆಯಲ್ಲಿ ಇನ್ನು ಕೆಲವರು ಭಾಗಿಯಾಗಿದ್ದು ತಲೆಮರೆಸಿಕೊಂಡಿರುವ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.

ಪ್ರಚೋದನೆ ನೀಡುವವರು ಯಾರೇ ಇರಲಿ, ಎಷ್ಟೇ ದೊಡ್ಡವರಾಗಿರಲಿ ಅಂಥವರ ಮೇಲೆ ಬಿಗಿಯಾದ ಕಾನೂನು ಕ್ರಮ ಜರುಗಿಸಲೇಬೇಕು. ಮೇಲ್ನೋಟಕ್ಕೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರದ್ದೇಶದಿಂದಲೇ ದುಷ್ಕರ್ಮಿಗಳು ಕೋಮುಗಲಭೆ ಸೃಷ್ಟಿಸಿದ್ದಾರೆ.

ಪೊಲೀಸರು ತೆಗೆದುಕೊಳ್ಳುವ ಯಾವುದೇ ತೀರ್ಮಾನದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ನಿಮಗೆ ಸಂಪೂರ್ಣವಾಗಿ ಮುಕ್ತ ಸ್ವಾತಂತ್ರ್ಯ ನೀಡುತ್ತೇನೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ ಮೂಡಿಸಲು ಏನೂ ಬೇಕಾದರೂ ಕ್ರಮ ಕೈಗೊಳ್ಳಿ.

ಯಾವುದೇ ಸಂಘಟನೆಗಳು ಈ ಗಲಭೆಯಲ್ಲಿ ಭಾಗಿಯಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸಿಎಂ ಅಕಾರಿಗಳಿಗೆ ಸೂಚನೆ ಕೊಟ್ಟರು.

ಶಾಂತಿಪ್ರಿಯವಾಗಿದ್ದ ಕರ್ನಾಟಕದಲ್ಲಿ ಇಂತಹ ಘಟನೆಗಳು ಏಕಾಏಕಿ ನಡೆದಿರಬೇಕಾದರೆ ಇದರ ಹಿಂದೆ ವ್ಯವಸ್ಥಿತ ಜಾಲವಿದೆ. ಏಕಾಏಕಿ ಮೂರು ಸಾವಿರಕ್ಕಿಂತ ಅಕ ಜನರು ಒಂದೆಡೆ ಕೂಡಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತಾರೆಂದರೆ ಇದು ಪೂರ್ವ ನಿಯೋಜಿತವಲ್ಲವೇ ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.

# ಅಸಮಾಧಾನ:
ಇನ್ನು ಗಲಭೆ ನಡೆಯುವುದನ್ನು ಪತ್ತೆಹಚ್ಚುವಲ್ಲಿ ವಿಫಲರಾದ ಪೊಲೀಸ್ ಅಕಾರಿಗಳ ಕಾರ್ಯ ವೈಖರಿಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇಷ್ಟೆಲ್ಲ ಅನಾಹುತಗಳಾದರೂ ಯಾಕೆ ಪರಿಸ್ಥಿತಿಯನ್ನು ಬೇಗ ನಿಯಂತ್ರಣಕ್ಕೆ ತರಲಿಲ್ಲ ಎಂದು ತರಾಟೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಆದಷ್ಟು ಬೇಗ ಆರೋಪಿಗಳನ್ನು ಪತ್ತೆಹಚ್ಚಿ, ಕಾನೂನು ಕ್ರಮಕೈಗೊಳ್ಳಿ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಗಲಭೆಗೆ ಕಾರಣ, ಗಲಭೆ ನಡೆಸಿದವರು, ಕೈಗೊಂಡ ಭದ್ರತೆ, ಕಾನೂನು ಸುವ್ಯವಸ್ಥೆ ಬಗ್ಗೆ ವರದಿ ಪಡೆದಿದ್ದಾರೆ. ಪೊಲೀಸರು ತಕ್ಷಣ ಗಲಭೆ ನಿಯಂತ್ರಣ ಮಾಡದ ಹಿನ್ನೆಲೆ ಪೊಲೀಸ್ ಇಲಾಖೆ ಮೇಲೆ ಗರಂ ಆಗಿರುವ ಸಿಎಂ ಯಡಿಯೂರಪ್ಪ, ಗಲಭೆ ತುಂಬಾ ಹೊತ್ತು ನಡೆಯಲು ಬಿಟ್ಟು ನೀವೆಲ್ಲ ಏನು ಮಾಡುತ್ತಿದ್ದಿರಿ? ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಸಾರ್ವಜನಿಕರ ವಾಹನಗಳು, ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ.
ಡಿಗೇಡಿಗಳ ದಾಂಧಲೆಯನ್ನು ಆರಂಭದಲ್ಲೇ ಯಾಕೆ ತಡೆಯಲಿಲ್ಲ? ಎಂದು ಬಿಎಸ್‍ವೈ ಪ್ರಶ್ನಿಸಿದ್ದಾರೆ.

ಇದು ಪೂರ್ವ ನಿಯೋಜಿತ ಕೃತ್ಯವಾದರೂ ಮೊದಲೇ ಯಾಕೆ ಪೊಲೀಸ್ ಇಲಾಖೆಗೆ ಗೊತ್ತಾಗಲಿಲ್ಲ? ಎಂದು ಸಿಎಂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ಆದಷ್ಟು ಬೇಗ ಪತ್ತೆ ಮಾಡಿ ಮತ್ತು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ.

Facebook Comments

Sri Raghav

Admin