ಜರ್ಮನಿಯಲ್ಲಿ ಬೆಳಗಿದ ಮೈಸೂರಿನ ಶೂಟಿಂಗ್ ಪ್ರತಿಭೆ

ಈ ಸುದ್ದಿಯನ್ನು ಶೇರ್ ಮಾಡಿ

# ಸಂತೋಷ್‍ರಾವ್ ಪೆರ್ಮುಡ

ಎಲ್ಲರಿಗೂ ಒಂದಲ್ಲ ಒಂದು ಕನಸಿರುತ್ತದೆ. ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಯಸ್ಸಂತೂ ಏನೇನೋ ಅದ್ಭುತ ಸಾಧನೆಗಳನ್ನು ಮಾಡುವ ಕನಸು ಮೊಳೆಯುವ ಸಮಯ. ಶಿಸ್ತು, ತಾಳ್ಮೆ ಮತ್ತು ಸಂಯಮದ ಜೀವನಕ್ಕೆ ಹೆಚ್ಚು ಮಹತ್ವ ನೀಡುವಂತಹ ಈ ಕನಸುಗಳು ಮೂಡುವುದು ಸಹಜ. ತಾನು ದೊಡ್ಡ ರಾಜಕಾರಣಿ, ಸೈನಿಕ, ಕ್ರೀಡಾಪಟು, ಎಂಜಿನಿಯರ್, ವಕೀಲ, ಪೈಲೆಟ್, ಪೆÇಲೀಸ್ ಅಧಿಕಾರಿ, ಡಾಕ್ಟರ್ ಹೀಗೆ ಏನೇನೋ ಆಗಬೇಕೆಂಬ ಕನಸುಗಳನ್ನು ಕಾಣುವುದು ಸಹಜ.

ವಿದ್ಯಾರ್ಥಿಗಳಷ್ಟೇ ಕನಸನ್ನು ಕಾಣುವುದಿಲ್ಲ. ಬದಲಿಗೆ ನಾವೆಲ್ಲರೂ ಒಂದಲ್ಲ ಒಂದು ರೀತಿಯ ಕನಸುಗಳನ್ನು ಕಾಣುತ್ತಲೇ ಇರುತ್ತೇವೆ. ವಿದ್ಯಾಭ್ಯಾಸ ಮುಗಿದ ನಂತರ ಜವಾಬ್ದಾರಿ ಯೆಡೆಗಿನ ತುಡಿತದಿಂದಾಗಿ ಜೀವನ ನಿರ್ವಹಣೆಗೆ ಉದ್ಯೋಗವೊಂದು ದೊರೆತರೆ ಸಾಕಪ್ಪಾ ಎನ್ನುವ ಸ್ಥಿತಿಗೆ ತಲುಪಿ ನಮ್ಮ ಬಾಲ್ಯದ ಕನಸನ್ನು ಸಂಪೂರ್ಣವಾಗಿ ಮರೆತೇ ಬಿಡುತ್ತೇವೆ. ಇಲ್ಲಿಂದ ಬದುಕಿನ ಹೊಸ ಕನಸು ಪ್ರಾರಂಭವಾಗಿ ಅದನ್ನು ಸಾಧಿಸುವುದರಲ್ಲೇ ಸಂಪೂರ್ಣವಾಗಿ ಮುಳುಗಿಬಿಡುತ್ತೇವೆ.

ಇವರೆಲ್ಲದರ ಪೈಕಿ ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಬಾಲ್ಯದ ಅದಮ್ಯ ಕನಸಿನ ಬೆನ್ನೇರಿ ತಮ್ಮ ಗುರಿಯನ್ನುಛಲ ಬಿಡದ ತ್ರಿವಿಕ್ರಮನಂತೆ ಸಾಧಿಸಿ ಯಶಸ್ವಿಯಾಗುತ್ತಾರೆ. ಅಂತಹ ಬಾಲ್ಯದ ಕನಸಿನ ಸಾಧಕರಂತೆ ನಾವೂ ನಮ್ಮ ಕನಸನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಸಾಧಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುವುದು ಸಹಜ. ಅಂತಹ ಒಬ್ಬ ವಿಶೇಷ ಸಾಧಕರಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವವರು ಮೈಸೂರಿನ ರಕ್ಷಿತ್ ಶಾಸ್ತ್ರಿ.

ಏರ್‍ರೈಫಲ್ ಶೂಟಿಂಗ್‍ನಲ್ಲಿ ಅಪ್ರತಿಮ ಸಾಧನೆ ಮಾಡಿದ ಮೈಸೂರಿನ ಪ್ರಥಮ ಅಂತಾರಾಷ್ಟ್ರೀಯ ಪದಕ ವಿಜೇತ. 1991ರಲ್ಲಿ ಜನಿಸಿದ ರಕ್ಷಿತ್ ಶಾಸ್ತ್ರಿ ವಾಸವಿರುವುದು ಮೈಸೂರಿನ ಬೋಗಾದಿಯಲ್ಲಿ. ಇವರ ತಾಯಿ ರಾಜಲಕ್ಷ್ಮಿ. ಮೆಕ್ಯಾನಿಕಲ್‍ಎಂಜಿನಿಯರಿಂಗ್, M.Tech (PDM) ಹಾಗೂ MBA (HRM) ಪದವಿ ಪಡೆದಿರುವ ಈತ ಪ್ರಸ್ತುತ ಮೈಸೂರಿನ ಎನ್.ರಂಗರಾವ್‍ಆ್ಯಂಡ್ ಸನ್ಸ್‍ನ ಅಂಗಸಂಸ್ಥೆಯಾದ ವ್ಯೋದಾ(ಪ್ರೈ.) ಲಿಮಿಟೆಡ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ರಕ್ಷಿತ್‍ಗೆ ಚಿಕ್ಕ ವಯಸ್ಸಿನಿಂದಲೂ ಈಜು, ಟೆನ್ನಿಸ್, ಕರಾಟೆ, ಕಟಾ ಇನ್ನಿತರ ಕ್ರೀಡೆಗಳೆಂದರೆ ಅತೀವ ಆಸಕ್ತಿ. ಶಾಲಾ ದಿನಗಳಲ್ಲೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್, ಕಿರಿಯರ ಗುಂಪಿನ ಕಟಾ ಪಂದ್ಯದಲ್ಲಿ ರಾಷ್ಟ್ರೀಯ ಚಿನ್ನದ ಪದಕ, ಕುಮಿತೆಯಲ್ಲಿ ಬೆಳ್ಳಿ ಪದಕ, ರಾಜ್ಯ ಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆ ್ಡ41000 ಫ್ರೀಸ್ಟೈಲ್ ಮೆಡ್ಲಿರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಎಂಜಿನಿಯರಿಂಗ್ ವಿದ್ಯಾಭ್ಯಾಸದ ಸಂದರ್ಭದಲ್ಲಿ ಟೇಬಲ್ ಟೆನ್ನಿಸ್ ಮತ್ತು ಬ್ಯಾಡ್‍ಮಿಂಟನ್ ಆಟದೆಡೆಗೆ ಆಕರ್ಷಿತರಾಗಿ ಅಂತರ್ ಕಾಲೇಜು ಮಟ್ಟದಲ್ಲಿ ತನ್ನ ಕಾಲೇಜನ್ನು ಪ್ರತಿನಿಧಿಸಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ವೃತ್ತಿಪರ ಟೆಬಲ್ ಟೆನ್ನಿಸ್ ಮತ್ತು ಬ್ಯಾಡ್‍ಮಿಂಟನ್ ಆಟಗಾರನಾಗಿರುವ ಇವರು ವಿವಿಧ ಪಂದ್ಯಾವಳಿಗಳಲ್ಲಿ ಪ್ರತಿಷ್ಠಿತ ತಂಡಗಳನ್ನು ಪ್ರತಿನಿಧಿಸುತ್ತಾರೆ.

ಟ್ರೆಕ್ಕಿಂಗ್, ಬೈಕ್ ರೈಡಿಂಗ್, ಓದು ಮತ್ತು ಸಮಾಜ ಸೇವೆ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು ಇವರ ವಿವಿಧ ಹವ್ಯಾಸಗಳು. ಸಣ್ಣ ವಯಸ್ಸಿನಲ್ಲೇ ಈತ ಮಾಡಿದ ಈ ಸಾಧನೆಗಳು ರಕ್ಷಿತ್ ಎಷ್ಟು ಪ್ರತಿಭಾವಂತ ಕ್ರೀಡಾಪಟು ಎನ್ನುವುದಕ್ಕೆ ಸಾಕ್ಷಿ.

ಶೂಟಿಂಗ್‍ಗೆ ಗುರಿಯಿಟ್ಟ ರಕ್ಷಿತ್: ರಕ್ಷಿತ್ ಶಾಸ್ತ್ರಿ ತಮ್ಮ ಸ್ನೇಹಿತ ವಿಫುಲ್ ಎಂಬುವವರ ಪ್ರೋತ್ಸಾಹದಿಂದ 2015ರಲ್ಲಿ ತಾವು ಎಂಬಿಎ ಓದುತ್ತಿರುವಾಗಲೇ ರೈಫಲ್ ಶೂಟಿಂಗ್ ತರಬೇತಿ ಪಡೆಯಲಾರಂಭಿಸಿದರು. ಭಾರತೀಯ ಸೇನೆಯ ಆರ್ಮಿ ಮಾಕ್ರ್ಸ್ ಮ್ಯಾನ್‍ಶಿಪ್ ಯೂನಿಟ್‍ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಾಗೂ ಮೈಸೂರು ಜಿಲ್ಲಾ ರೈಫಲ್ ಅಸೋಸಿಯೇಷನ್ ಸಂಸ್ಥಾಪಕರಾದ ಸುರೇಶ್ ಎಂ.ಎಸ್. ಅವರ ಗರಡಿಯಲ್ಲಿ ತರಬೇತಿ ಪಡೆಯಲಾರಂಭಿಸಿದರು.

ತರಬೇತಿ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಶೂಟಿಂಗ್‍ಏರ್‍ರೈಫಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿ ಎಂಡಿಆರ್‍ಎಗೆ ಬೆಳ್ಳಿ ಪದಕ ತಂದುಕೊಡುತ್ತಾರೆ. ತಮ್ಮ ತರಬೇತುದಾರರಾದ ಸುರೇಶ್ ಅವರು 1991ರಲ್ಲಿ ಶೂಟಿಂಗ್‍ನಲ್ಲಿ ರಾಷ್ಟ್ರೀಯ ದಾಖಲೆ ಬರೆದ ವಿಚಾರವನ್ನು ತಿಳಿದು ಅದರಿಂದ ಸ್ಫೂರ್ತಿಯಾಗಿ ಕಠಿಣ ಪಿಸ್ತೂಲ್‍ತರಬೇತಿಯಲ್ಲಿ ತೊಡಗಿದರು.

ಇದರ ಪರಿಣಾಮವಾಗಿ 7ನೆ ದಕ್ಷಿಣ ವಲಯದ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಎ ತಂಡ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನದ ಪದಕ ಗಳಿಸಿತು. ಇಲ್ಲಿಂದ ರಕ್ಷಿತ್‍ಜೀವನದ ಚಿತ್ರಣವೇ ಬದಲಾಯಿತು. ಅವರು ಮಾಡಿದ ಸಾಧನೆಗಳೆಲ್ಲ ದಾಖಲೆಗಳಾಗುತ್ತ ಹೋದವು.

ಪ್ರಮುಖ ಸಾಧನೆಗಳು: ರಕ್ಷಿತ್ ಶೂಟಿಂಗ್‍ನಲ್ಲಿ ಸರಿಸುಮಾರು 50ಕ್ಕೂ ಹೆಚ್ಚು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳು, ರಾಷ್ಟ್ರೀಯ ಮತ್ತು ಫೆಡರೇಷನ್‍ಕಪ್ ದಾಖಲೆಗಳನ್ನು ಬರೆದು 35 ರಾಷ್ಟ್ರೀಯ ಪದಕಗಳನ್ನು ಗಳಿಸಿದ್ದಾರೆ. ಜರ್ಮನಿಯ ಹ್ಯಾನೋವರ್‍ನಲ್ಲಿ 9ನೇ ಮೇ 2019ರಂದು ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸಿಡಿಆರ್‍ಎ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದ ಪ್ರಥಮ ಹಾಗೂ ಏಕೈಕ ಮೈಸೂರಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

2016ರಲ್ಲಿ ಮುಂಬೈನಲ್ಲಿ ನಡೆದ 26ನೆ ಜಿ.ವಿ.ಮಾವಲಂಕರ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ 3ನೆ ಸ್ಥಾನ ಹಾಗೂ ಆ ಸ್ಪರ್ಧೆಯ ಎಲ್ಲ ವಿಭಾಗಗಳೂ ಸೇರಿ ಕರ್ನಾಟಕಕ್ಕೆ ಬಂದ ಏಕೈಕ ಪದಕವಿದು. ತಿರುವನಂತಪುರಂನಲ್ಲಿ ನಡೆದ 62ನೆ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ 28ನೆ ಶ್ರೇಯಾಂಕ ಗಳಿಸಿದ್ದಾರೆ. ಶೂಟಿಂಗ್‍ನಲ್ಲಿ ಅಂತಾರಾಷ್ಟ್ರೀಯ ಪದಕ ಗೆದ್ದ ಮೈಸೂರಿನ ಪ್ರಥಮ ಕ್ರೀಡಾಪಟುವೆಂಬ ಹೆಗ್ಗಳಿಕೆಯೊಂದಿಗೆ ಪ್ರಸ್ತುತ ಭಾರತ ತಂಡಕ್ಕೆ ಆಯ್ಕೆ ಟ್ರಯಲ್ಸ್ ನೀಡುತ್ತಿರುವ ಹೆಮ್ಮೆಯ ಗುರಿಕಾರ ರಕ್ಷಿತ್.

ಹವ್ಯಾಸಗಳು: ಸರ್ಕಾರಿ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಕ್ಷಿತ್ ತಮ್ಮ ಬಿಡುವಿನ ಸಮಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಹೇಳಿಕೊಡುವುದು, ಪುಸ್ತಕಗಳನ್ನು ಕೊಡುಗೆಯಾಗಿ ನೀಡುವಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.
ಭಾರತದಲ್ಲಿ ಕ್ರಿಕೆಟ್ ಮತ್ತಿತರ ಕ್ರೀಡೆಗಳನ್ನು ಹೊರತುಪಡಿಸಿ ಶೂಟಿಂಗ್, ಹಾಕಿ, ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಬೆಳಕಿಗೆ ಬರುವುದು ಬಹಳ ಕಡಿಮೆ. ಕ್ರಿಕೆಟ್‍ಗೆ ಇದ್ದಷ್ಟು ಪ್ರೋತ್ಸಾಹ ನಮ್ಮಲ್ಲಿ ಶೂಟಿಂಗ್‍ಗೆ ಇಲ್ಲ.

ರಾಜ್ಯವರ್ಧನ್ ಸಿಂಗ್ ರಾಥೋಡ್, ಅಭಿನವ್ ಬಿಂದ್ರಾ, ಗಗನ್ ನಾರಂಗ್, ವಿಜಯ್‍ಕುಮಾರ್‍ಎಲ್ಲರೂ ಸಹ ಶೂಟಿಂಗ್‍ನಲ್ಲಿ ಒಲಂಪಿಕ್ ಪದಕ ವಿಜೇತರು. ಇವರೆಲ್ಲ ಕ್ರಿಕೆಟಿಗರಷ್ಟು ಪ್ರಸಿದ್ಧಿಯಾಗಿಲ್ಲ. ಈ ಕುರಿತು ರಕ್ಷಿತ್ ಅವರನ್ನು ಕೇಳಿದರೆ, ನಮ್ಮ ಕೆಲಸ ನಾವು ಮಾಡುತ್ತಾ ಹೋಗಬೇಕು, ಹೊಗಳಿಕೆ ಸನ್ಮಾನಗಳು ಮುಖ್ಯವಲ್ಲ ಎನ್ನುತ್ತಾರೆ.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ವಿದ್ಯಾರ್ಜನೆ ಹಾಗೂ ಅಂಕ ಗಳಿಕೆಯಷ್ಟೇ ತಮ್ಮ ಜೀವನದ ಪರಮ ಗುರಿ ಎಂದು ಭಾವಿಸಿ ಅಷ್ಟಕ್ಕೇ ಪ್ರಾಧಾನ್ಯತೆ ನೀಡುತ್ತಾರೆ. ಆದರೆ, ಕೆಲವೇ ಕೆಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆ ಮತ್ತಿತರ ಕ್ಷೇತ್ರಕ್ಕೂ ಸಮಾನವಾದ ಪ್ರಾತಿನಿಧ್ಯ ನೀಡಿ ಸಾಧಕರಾಗಿ ಮೂಡಿಬರುತ್ತಾರೆ. ಅಂತಹ ವಿಶೇಷ ಸಾಧಕರ ಸಾಲಿಗೆ ರಕ್ಷಿತ್ ಶಾಸ್ತ್ರಿಯೂ ಸೇರುತ್ತಾರೆ.

ಎಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದು ಹೆಸರಾಂತ ಎಂಜಿನಿಯರ್ ಆಗುವ ಕನಸಿನ ಮಧ್ಯೆ ವೈವಿಧ್ಯಮಯ ಕ್ರೀಡಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಠಿಣ ಪರಿಶ್ರಮ, ಬದ್ಧತೆ, ನಿರಂತರ ಅಭ್ಯಾಸ ಹಾಗೂ ಛಲದಿಂದ ಏರ್‍ಪಿಸ್ತೂಲ್ ಶೂಟಿಂಗ್, ಈಜು, ಕರಾಟೆ, ಟೇಬಲ್ ಟೆನ್ನಿಸ್ ಮತ್ತು ಬ್ಯಾಡ್‍ಮಿಂಟನ್ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಸದ್ಯ ಶೂಟಿಂಗ್‍ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ಇವರಿಗೆ ಗುರುಗಳು ಗುರಿಕಾರಿಕೆಯಲ್ಲಿ ಹೇಳಿಕೊಟ್ಟಿರುವ ತಂತ್ರಗಳನ್ನು ಅನುಸರಿಸಿಕೊಂಡು ದೇಶಕ್ಕೆ ಪದಕ ಗೆದ್ದುಕೊಡಬೇಕೆಂಬ ಮಹದಾಸೆ ಹೊಂದಿದ್ದಾರೆ.

ತಮ್ಮ ಸಾಧನೆಯ ಹಿಂದೆ ನೈತಿಕ ಮತ್ತು ಮಾನಸಿಕವಾಗಿ ಪ್ರಾರಂಭಿಕ ಹಂತದಿಂದಲೇ ಬೆಂಬಲ ಕೊಟ್ಟು ಪ್ರೋತ್ಸಾಹಿಸಿದ ರಂಗರಾವ್ ಅಂಡ್ ಸನ್ಸ್ ಸಂಸ್ಥೆಯ ಅರ್ಜುನ್‍ರಂಗ ಅವರನ್ನು ಬಹುವಾಗಿ ಸ್ಮರಿಸುತ್ತಾರೆ ರಕ್ಷಿತ್. ಏರ್‍ರೈಫಲ್ ಶೂಟಿಂಗ್ ಕ್ಷೇತ್ರದಲ್ಲಿ ಕರ್ನಾಟಕದಿಂದ ಹೊಸದಾಗಿ ಉದಯಿಸಿರುವ ನಕ್ಷತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಲಿ ಎಂಬುದೇ ಎಲ್ಲರ ಹಾರೈಕೆ.

Facebook Comments

Sri Raghav

Admin