ಮತ್ತೆ ಘರ್ಜಿಸಿದ ಪೊಲೀಸರ ರಿವಾಲ್ವರ್, ದರೋಡೆಕೋರನಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಯಲಹಂಕ, ಫೆ.11- ನಗರದಲ್ಲಿ ಮತ್ತೆ ಪೊಲೀಸರ ರಿವಾಲ್ವರ್ ಸದ್ದು ಮಾಡಿದ್ದು, ರೌಡಿ ಹಾಗೂ ದರೋಡೆಕೋರನೊಬ್ಬ ಯಲಹಂಕ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ. ಕುಖ್ಯಾತ ದರೋಡೆಕೋರ ಶಬರೀಶ್ ಅಲಿಯಸ್ ಅಪ್ಪಿ (27) ಗಾಯಗೊಂಡಿರುವ ರೌಡಿ. ಆರೋಪಿ ಶಬರೀಶ್ ಯಲಹಂಕ ಠಾಣೆಯ ರೌಡಿ ಶೀಟರ್. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದಾಗ ಮುರಳಿ, ಇಮ್ರಾನ್, ರಂಜಿತ್ ಪರಿಚಯವಾಗಿದೆ.

ಫೆ.3ರಂದು ಯಲಹಂಕದ ಸುರಭಿ ಲೇಔಟ್‍ನಲ್ಲಿ ಎರಡು ಪಲ್ಸರ್ ಬೈಕ್, ಹೋಂಡಾ ಡಿಯೋ ಕಳ್ಳತನ ಮಾಡಿದ್ದರು. ಅಷ್ಟೇ ಅಲ್ಲದೆ ಯಲಹಂಕದ ಏರ್ ಶೋ ವೇಳೆ ಅನೇಕ ಬೈಕ್‍ಗಳನ್ನು ಈ ಗ್ಯಾಂಗ್ ಕಳ್ಳತನ ಮಾಡಿತ್ತು. ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಆರೋಪಿ ಶಬರೀಶ್ ನಗರದ ಹಲವು ಕಡೆ ದರೋಡೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಲ್ಲದೆ, ಯಲಹಂಕ ಠಾಣೆಯಲ್ಲಿ 14 ಪ್ರಕರಣಗಳು ಸೇರಿದಂತೆ ಕುಮಾರಸ್ವಾಮಿ ಲೇಔಟ್, ಪೀಣ್ಯ, ಸಂಪಿಗೆಹಳ್ಳಿ, ಸಂಜಯನಗರ, ನೆಲಮಂಗಲ, ಚಿಕ್ಕಜಾಲ ಠಾಣೆಗಳಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿವೆ.

ನಿನ್ನೆ ರಾತ್ರಿ 12.30ರ ಸಮಯದಲ್ಲಿ ನಾಗರಾಜ್ ಎಂಬುವವರು ಮಾರುತಿ ಸಿಲಾರಿಯೋ ಕಾರಿನಲ್ಲಿ ಬರುತ್ತಿದ್ದಾಗ ಆಟೋದಲ್ಲಿ ಬಂದ ನಾಲ್ವರು ಕೋಗಿಲು ಕ್ರಾಸ್ ಬಳಿ ಕಾರನ್ನು ಅಡ್ಡಗಟ್ಟಿ ಲಾಂಗ್‍ನಿಂದ ಹಲ್ಲೆ ಮಾಡಿ 700ರೂ. ಹಣ, ಮೊಬೈಲ್, ಎಟಿಎಂ ಕಾರ್ಡ್ ಮತ್ತು ಮಾರುತಿ ಕಾರನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗುತ್ತಿದ್ದರು. ನಾಗರಾಜ್ ಅವರು ತಕ್ಷಣ ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ದರೋಡೆಕೋರರ ಪತ್ತೆಗೆ ಯಲಹಂಕ ಠಾಣೆ ಇನ್ಸ್‍ಪೆಕ್ಟರ್ ರಾಮಕೃಷ್ಣಾರೆಡ್ಡಿ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಇಂದು ಬೆಳಗಿನ ಜಾವ 4.40ರ ಸುಮಾರಿನಲ್ಲಿ ಈ ತಂಡ ದರೋಡೆಕೋರರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾಗ ಯಲಹಂಕ ವ್ಯಾಪ್ತಿಯ ವೆಂಕಟಾಲ ಬಸ್ ನಿಲ್ದಾಣದ ಬಳಿ ಸುಲಿಗೆ ಮಾಡಿಕೊಂಡು ಹೋಗಿದ್ದ ಕಾರು ಕೋಗಿಲು ಕ್ರಾಸ್ ಬಳಿ ನಿಂತಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ಈ ತಂಡ ಅಲ್ಲಿಗೆ ತೆರಳುತ್ತಿದ್ದಂತೆ ಪೊಲೀಸರನ್ನು ಕಂಡು ದರೋಡೆಕೋರರು ಅಲ್ಲಿಂದ ಕಾರು ಚಲಾಯಿಸಿಕೊಂಡು ಬಿಡಿಕೆ ಸರ್ಕಲ್ ಮುಖಾಂತರ ದೊಡ್ಡಬಳ್ಳಾಪುರ ರಸ್ತೆ ಕಡೆಗೆ ಹೋಗುತ್ತಿದ್ದಾಗ ಪೊಲೀಸರು ಆ ಕಾರನ್ನು ಹಿಂಬಾಲಿಸಿದ್ದಾರೆ.

ಕಾರು ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ್ ಥಿಯೇಟರ್ ಹಿಂಭಾಗದ ರಸ್ತೆಯ ಕೊನೆಯಲ್ಲಿ ಕಸ ಹಾಕಿದ ಜಾಗದಲ್ಲಿ ನಿಂತುಕೊಂಡಿರುವುದನ್ನು ಕಂಡು ತನಿಖಾ ತಂಡ ಸಮೀಪ ಹೋಗಿ ಕಾರನ್ನು ಸುತ್ತುವರಿದಾಗ ಕಾರಿನಲ್ಲಿ ಮೂವರ ಪೈಕಿ ಇಬ್ಬರು ಕಾರಿನಿಂದ ಇಳಿದು ಕತ್ತಲಲ್ಲಿ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ಆರೋಪಿ ಶಬರೀಶ್ ಲಾಂಗ್ ಹಿಡಿದು ಕಾನ್‍ಸ್ಟೆಬಲ್ ಶಿವಕುಮಾರ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಇನ್‍ಸ್ಪೆಕ್ಟರ್ ರಾಮಕೃಷ್ಣಾರೆಡ್ಡಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.

ಪೊಲೀಸರ ಮಾತನ್ನು ಲೆಕ್ಕಿಸದೆ ಮತ್ತೆ ದಾಳಿಗೆ ಮುಂದಾದಾಗ ಇನ್‍ಸ್ಪೆಕ್ಟರ್ ಹಾರಿಸಿದ ಗುಂಡು ಆರೋಪಿ ಶಬರೀಶ್ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಕಾನ್‍ಸ್ಟೆಬಲ್ ಶಿವಕುಮಾರ್ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳಾದ ಇಮ್ರಾನ್ (26) ಮತ್ತು ಮುರಳಿ (21) ಬಂಧನಕ್ಕೆ ಪತ್ತೆಕಾರ್ಯ ಮುಂದುವರಿದಿದೆ. ಆರೋಪಿ ಇಮ್ರಾನ್ ವಿರುದ್ಧ ಕುಮಾರಸ್ವಾಮಿ ಲೇಔಟ್, ನೆಲಮಂಗಲ, ಪೀಣ್ಯ, ಡಿಜೆ ಹಳ್ಳಿ ಸೇರಿದಂತೆ ಇತರ ಪೊಲೀಸ್ ಠಾಣೆಗಳಲ್ಲಿ ಸುಮಾರು 15 ಪ್ರಕರಣಗಳು ದಾಖಲಾಗಿದ್ದರೆ, ಆರೋಪಿ ಮುರಳಿ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಯಲಹಂಕ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments